

ಗುಂಡ್ಲುಪೇಟೆ: ಕಳೆದ ನಾಲ್ಕು ತಿಂಗಳ ಹಿಂದೆ ರಾಜ್ಯದ ಕೇರಳ ಗಡಿಯಲ್ಲಿದ್ದ ಪೊಲೀಸ್ ಚೆಕ್‌ಪೋಸ್ಟ್ ಅನ್ನು ಬೇರೆಡೆಗೆ ಸ್ಥಳಾಂತರಿಸಿದ ಪರಿಣಾಮ ತ್ಯಾಜ್ಯ ಸೇರಿದಂತೆ ಅಕ್ರಮ ಸಾಗಣೆಗಳು ಹೆಚ್ಚಾಗಿವೆ. ಕೇರಳ ಹಾಗೂ ತಮಿಳುನಾಡಿನಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಪರಿಣಾಮ ಅಲ್ಲಿನ ತ್ಯಾಜ್ಯಗಳನ್ನು ಲಾರಿಯಲ್ಲಿ ತಂದು ಮೂಲೆಹೊಳೆ ಚೆಕ್‌ಪೋಸ್ಟ್ ಮೂಲಕ ರಾಜ್ಯ ಪ್ರವೇಶಿಸಿ ಗಡಿ ಪ್ರದೇಶದಲ್ಲಿ ಸುರಿಯಲಾಗುತ್ತಿದೆ.
ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಬೇಕು. ಆದರೆ, ಇಲ್ಲಿ ಇದ್ದ ಚೆಕ್‌ಪೋಸ್ಟ್ ಅನ್ನು ಬೇರೆಡೆಗೆ ಸ್ಥಳಾಂತರಿಸಿದ ಪರಿಣಾಮ ಇಲ್ಲಿ ಪೊಲೀಸ್ ಸಿಬ್ಬಂದಿ ಇಲ್ಲ. ಇದರಿಂದ ತ್ಯಾಜ್ಯ ತುಂಬಿದ ಲಾರಿಗಳು ರಾಜಾರೋಷವಾಗಿ ರಾಜ್ಯವನ್ನು ಪ್ರವೇಶಿಸುತ್ತಿವೆ.
ಕಳೆದ ಎರಡು ದಿನಗಳ ಹಿಂದೆ ಕೇರಳದಿಂದ ರಾಜ್ಯ ಪ್ರವೇಶಿಸಿದ್ದ ಲಾರಿ ತಿಂಡಿ, ತಿನಿಸುಗಳ ಕವರ್‌ಗಳು, ಪುರಸಭೆ ತ್ಯಾಜ್ಯಗಳು, ಮಾಂಸ ಹಾಗೂ ಕ್ಲಿನಿಕಲ್ ತ್ಯಾಜ್ಯಗಳನ್ನು ತುಂಬಿಕೊಂಡು ಬಂದಿತ್ತು. ತಾಲೂಕಿನ ನಿರ್ಜನ ಪ್ರದೇಶದಲ್ಲಿ ಸುರಿಯಲು ಯತ್ನಿಸುತ್ತಿದ್ದಾಗ ಸಾರ್ವಜನಿಕರೇ ಲಾರಿಯ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಅಕ್ರಮ ಸಾಗಣೆಗೆ ಕಡಿವಾಣ ಬಿದ್ದಿತ್ತು :
ಬಂಡೀಪುರದ ಮೂಲೆಹೊಳೆಯಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಚೆಕ್‌ಪೋಸ್ಟ್ ತೆರೆಯಲಾಗಿತ್ತು. ಇದರಿಂದ ಅಕ್ರಮಗಳಿಗೆ ಬ್ರೇಕ್ ಬಿದ್ದಿತ್ತು. ಅಲ್ಲದೆ ನಕ್ಸಲ್ ಚಟುವಟಿಕೆ ಮೇಲೂ ಕಣ್ಣು ಇಡಲಾಗಿತ್ತು. ಇಂತಹ ಪ್ರದೇಶದಲ್ಲಿ ಭದ್ರತೆಯನ್ನು ಇನ್ನೂ ಹೆಚ್ಚಿಸಬೇಕಿತ್ತು. ಆದರೆ ಕಳೆದ ನಾಲ್ಕು ತಿಂಗಳ ಹಿಂದೆ ರಾಜ್ಯ ವಿಭಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೂಲೆಹೊಳೆಯಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲ ಎಂಬ ಕ್ಷುಲ್ಲಕ ಕಾರಣ ನೀಡಿ, ಅಲ್ಲಿದ್ದ ಪೊಲೀಸ್ ಚೆಕ್‌ಪೋಸ್ಟ್ ಅನ್ನು ಮದ್ದೂರು ಸಮೀಪಕ್ಕೆ ಸ್ಥಳಾಂತರ ಮಾಡಲಾಗಿದೆ. ಆದ್ದರಿಂದ ರಾಜ್ಯದ ಭದ್ರತೆ ಹಾಗೂ ಹಿತಾಸಕ್ತಿಯ ದೃಷ್ಟಿಯಿಂದ ಇನ್ನಾದರೂ ಪೊಲೀಸ್ ಇಲಾಖೆಯು ಮೂಲೆಹೊಳೆಯಲ್ಲಿ ಚೆಕ್‌ಪೋಸ್ಟ್ ಆರಂಭಿಸಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲು ಕ್ರಮಕೈಗೊಳ್ಳಬೇಕು ಎಂದು ರೈತ ಮುಖಂಡ ಹಂಗಳ ಮಾಧು ಒತ್ತಾಯಿಸಿದ್ದಾರೆ.
ಮಾಡ್ರಹಳ್ಳಿ ಸಮೀಪ ಟೀ ಕುಡಿಯಲು ಚಾಲಕ ವಾಹನ ನಿಲ್ಲಿಸಿದ್ದ. ದುರ್ವಾಸನೆ ಬೀರುತ್ತಿತ್ತು. ಪರಿಶೀಲಿಸಿದಾಗ ಕ್ಲಿನಿಕಲ್ ಹಾಗೂ ಪುರಸಭೆಯ ತ್ಯಾಜ್ಯಗಳು ಇರುವುದು ಕಂಡುಬಂತು. ಪೊಲೀಸರಿಗೆ ಕರೆ ಮಾಡಿ ಅವರ ವಶಕ್ಕೆ ನೀಡಲಾಗಿದೆ. ತ್ಯಾಜ್ಯ ತುಂಬಿದ ಲಾರಿಗಳು ಮೂಲೆಹೊಳೆಯ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಹಾಗೂ ಮದ್ದೂರು ಚೆಕ್‌ಪೋಸ್ಟ್ ದಾಟಿ ರಾಜ್ಯದೊಳಗೆ ಪ್ರವೇಶಿಸುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳಬೇಕು.ನಾಗೇಂದ್ರ, ಮಾಡ್ರಹಳ್ಳಿ ಗ್ರಾಮಸ್ಥರು.
ನಾನು ಕಳೆದ ನಾಲ್ಕು ದಿನಗಳ ಹಿಂದೆ ವರ್ಗಾವಣೆಯಾಗಿ ಬಂದಿದ್ದು ಈ ಬಗ್ಗೆ ಪರಿಶೀಲಿಸಲಾಗುವುದು.ಪರಶಿವಮೂರ್ತಿ, ಗುಂಡ್ಲುಪೇಟೆ ಸರ್ಕಲ್ ಇನ್ಸ್‌ಪೆಕ್ಟರ್.