

ಚಾಮರಾಜನಗರ: ಸಾರ್ವಜನಿಕ ಜೀವನದಲ್ಲಿ ರಾಜಕಾರಣಿ ಹೇಗಿರಬೇಕು ಎಂಬುದಕ್ಕೆ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ಜೀವನ ಆದರ್ಶವಾಗಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಭಿಪ್ರಾಯಪಟ್ಟರು.
ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಬಿ.ರಾಚಯ್ಯ ಪ್ರತಿಷ್ಠಾನದ ವತಿಯಿಂದ ಗುರುವಾರ ಆಯೋಜಿಸಿದ್ದ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ 101ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾಡು ಕಂಡ ಅಪರೂಪದ ವ್ಯಕ್ತಿತ್ವ ಹೊಂದಿದ್ದ ಬಿ.ರಾಚಯ್ಯ ಅವರು ರಾಜ್ಯದ ರೈತರು, ದುಡಿಯುವ ವರ್ಗ ಹಾಗೂ ಶೋಷಿತರ ಪರವಾಗಿ ಅತ್ಯಂತ ಪರಿಣಾಮಕಾರಿಯಾಗಿ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಿದರು. ಸುಮಾರು 50 ವರ್ಷಗಳ ಸುದೀರ್ಘವಾದ ಜನಪರ ರಾಜಕಾರಣವನ್ನು ನಾಡಿಗೆ ನೀಡಿದ್ದಾರೆ. ಅತ್ಯಂತ ಕಷ್ಟದ ಜೀವನ ನಡೆಸುವ ಮೂಲಕ ಸಾಧನೆಯ ಮೆಟ್ಟಿಲು ಏರಿದ ಅವರು, ಸಮಸಮಾಜ ನಿರ್ಮಾಣ ಮಾಡಲು ಶ್ರಮಿಸಿದರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಬಿ.ರಾಚಯ್ಯ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಬಹಳಷ್ಟು ಖ್ಯಾತಿ ಪಡೆದಿದ್ದು, ಅನೇಕ ರಾಜಕೀಯ ನಾಯಕರನ್ನು ನಾಡಿಗೆ ಕೊಡುಗೆಯಾಗಿ ನೀಡಿದೆ. ಬಿ.ರಾಚಯ್ಯ ಅವರ ಅವಧಿಯಲ್ಲಿ ಶಾಸಕರನ್ನು ರಾಜಕೀಯ ಪಕ್ಷಗಳು ಆಯ್ಕೆ ಮಾಡುತ್ತಿರಲಿಲ್ಲ. ಬದಲಾಗಿ ಜನರೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇದರಿಂದಾಗಿ ರಾಚಯ್ಯ ಅವರಂತಹ ನೇತಾರರನ್ನು ಕಾಣಲು ಸಾಧ್ಯವಾಯಿತು. ಪ್ರಸ್ತುತ ಚುನಾವಣೆಗಳಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗೆದ್ದು ಬಂದವರು ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗ ಉತ್ತಮವಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಸ್ವಯಂ ವಿಮರ್ಶೆ ಮಾಡಿಕೊಳ್ಳಬೇಕು. ಜನರಿಂದ ಆಯ್ಕೆಯಾದ ಬಿ.ರಾಚಯ್ಯ ಅವರಂತಹ ಅಪರೂಪದ ರಾಜಕಾರಣಿಯ ತ್ಯಾಗ ಮತ್ತು ಹೋರಾಟ ಸ್ಮರಣೆ ಮಾಡಿಕೊಳ್ಳಬೇಕು ಎಂದರು.
ನಾಡು ಕಂಡ ಜನಪರ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆ ಅವರ ಸರ್ಕಾರಗಳಲ್ಲಿ ಬಿ.ರಾಚಯ್ಯ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿ ಹುದ್ದೆ ಹಾಗೂ ಹಣಕಾಸು ಇಲಾಖೆ ಹೊರತುಪಡಿಸಿ, ಇತರ ಎಲ್ಲ ಹುದ್ದೆ ಹಾಗೂ ಇಲಾಖೆಗಳಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. ಸಂವಿಧಾನವನ್ನು ಕಡೆಗಣಿಸದೆ, ಸಮಾಜವನ್ನು ಇಬ್ಭಾಗ ಮಾಡದೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂಬ ಪ್ರಯತ್ನಗಳನ್ನು ಮಾಡಿದ್ದ ರಾಚಯ್ಯ ಅವರು ಸೋಲನ್ನೂ ಅನುಭವಿಸಿದ್ದರು. ರಾಜ್ಯಸಭಾ, ಲೋಕಸಭಾ ಸದಸ್ಯರಾಗಿದ್ದರು. ರಾಜ್ಯಪಾಲರು ಎಂದರೆ ರಾಜಕಾರಣ ಮಾಡುವವರಲ್ಲ, ಸಂವಿಧಾನಕ್ಕೆ ಗೌರವ ತಂದುಕೊಡುವ ಸ್ಥಾನವಾಗಿದೆ ಎಂಬುದನ್ನು ದೇಶಕ್ಕೆ ತಿಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ಮಾಜಿ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ಪ್ರಸ್ತುತ ಬಿ.ರಾಚಯ್ಯ ಅವರ 50 ವರ್ಷಗಳ ರಾಜಕೀಯ ಸಾಧನೆ ಮಾತನಾಡುತ್ತಿದೆ. ಯಾವುದೇ ಕಳಂಕ ಇಲ್ಲದ ರಾಜಕಾರಣಿಯಾಗಿದ್ದ ಅವರ ವ್ಯಕ್ತಿತ್ವ, ಮೌಲ್ಯ, ಸಾಧನೆಯ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳುವ ಸಾರ್ಥಕವಾದ ಕೆಲಸ ಇದಾಗಿದೆ. ಬಿ.ರಾಚಯ್ಯ ಅವರ ರಾಜಕೀಯ ಮತ್ತು ಸಾಮಾಜಿಕ ಜೀವನ ತೆರೆದ ಪುಸ್ತಕವಿದ್ದಂತೆ. ಅಂತರಂಗ ಮತ್ತು ಬಹಿರಂಗದಲ್ಲಿ ಒಂದೇ ತರಹದ ಚಿಂತನೆ ಇಟ್ಟುಕೊಂಡಿದ್ದರು. ಪ್ರತಿಯೊಬ್ಬರೂ ಸಾಮರಸ್ಯದಿಂದ ಬದುಕುವ ರಾಜಕೀಯವನ್ನು ನಾಡಿಗೆ ಕೊಡುಗೆಯಾಗಿ ನೀಡಿದರು. ಆದರ್ಶದ ದೃಷ್ಟಿಯಿಂದ ರಾಚಯ್ಯ ಅವರ ಬದುಕು ಒಂದು ಪ್ರಯೋಗಾಲಯವಿದ್ದಂತೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಶಾಸಕ ಎ.ಆರ್.ಕೃಷ್ಣಮೂರ್ತಿ, ಮಾಜಿ ಸಂಸದರಾದ ಎಂ.ಶಿವಣ್ಣ, ಎ.ಸಿದ್ದರಾಜು, ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ, ಆರ್.ನರೇಂದ್ರ, ನಗರಸಭೆ ಮಾಜಿ ಅಧ್ಯಕ್ಷ ಎಸ್.ನಂಜುಂಡಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಬಾಲರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಂಟೇಶ್, ಬಿ.ಕೆ.ರವಿಕುಮಾರ್ ಇತರರು ಉಪಸ್ಥಿತರಿದ್ದರು.
‘ಅನ್ಯಾಯಕಾರಿ ಬ್ರಹ್ಮ…’
ಬಿ.ರಾಚಯ್ಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಖ್ಯಾತ ಜಾನಪದ ಗಾಯಕ ಡಾ.ಮಳವಳ್ಳಿ ಮಹದೇವಸ್ವಾಮಿ ಅವರನ್ನು ಸನ್ಮಾನ ಮಾಡಲಾಯಿತು. ಈ ವೇಳೆ ‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ’ ಜಾನಪದ ಗೀತೆಯನ್ನು ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.