ಚಾಮರಾಜನಗರ: ಜಿಲ್ಲೆಯ 2 ವಿಧಾನಸಭಾ ಕ್ಷೇತ್ರದಲ್ಲಿ ಸರ್ವೋದಯ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿದ್ದೇವೆ ಎಂದು ಸರ್ವೋದಯ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎ.ಗೌಡ ತಿಳಿಸಿದರು.
ರಾಜ್ಯದ 14 ಕ್ಷೇತ್ರಗಳಲ್ಲಿ ಸರ್ವೋದಯ ಪಕ್ಷದ ಅಭ್ಯರ್ಥಿಗಳನ್ನು ಕಣಕಳಿಸಲಿದ್ದೇವೆ. ಜಿಲ್ಲೆಯ ಚಾ.ನಗರ ಕ್ಷೇತ್ರದಿಂದ ಎಚ್.ಸಿ.ಮಹೇಶ್‌ಕುಮಾರ್ ಹಾಗೂ ಹನೂರು ಕ್ಷೇತ್ರದಿಂದ ಶೈಲೇಂದ್ರ (ಶ್ರೀಕಂಠಸ್ವಾಮಿ) ಸ್ಪರ್ಧಿಸಲಿದ್ದಾರೆ. ಈ ಬಾರಿ ಇತರ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡುವ ಉದ್ದೇಶದಿಂದ ಚಳವಳಿಯ ಹಿನ್ನೆಲೆ ಇರುವ ಕಾರ್ಯಕರ್ತರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದ್ದೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಜಾಪ್ರಭುತ್ವದ ಉಳಿವು ಮತ್ತು ಸಂವಿಧಾನದ ಆಶಯಗಳನ್ನು ಉಳಿಸುವ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸಲಿದ್ದೇವೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಯನ್ನು ವಿಧಾನಸಭೆಗೆ ಕಳುಹಿಸಬೇಕು. ಜನಪರವಾದ ಮತ್ತು ರೈತರ ಪರವಾಗಿ ದನಿಯಾಗುವ ನಾಯಕರನ್ನು ಆಯ್ಕೆ ಮಾಡಲು ಮತದಾರರು ಮುಂದಾಗಬೇಕು. ಈ ಹಿಂದಿನ ಯಾವುದೇ ಪಕ್ಷಗಳು ಆ ರೀತಿಯ ಕೆಲಸಗಳನ್ನು ಮಾಡಿಲ್ಲ. ಕ್ಷೇತ್ರದ ಮತದಾರರು ಹಣ, ಆಮಿಷಕ್ಕೆ ಬಲಿಯಾಗಬಾರದು. ಸೂಕ್ತ ವ್ಯಕ್ತಿಗೆ ಮತ ಹಾಕಬೇಕು. ಜಾತಿ ಮತ ಬಿಟ್ಟು ಹೋರಾಟದಲ್ಲಿ ತೊಡಗಿಸಿಕೊಂಡವರನ್ನು ವಿಧಾನಸಭೆಗೆ ಆಯ್ಕೆ ಮಾಡಬೇಕು ಎಂದರು.
ರಸ್ತೆ, ಕುಡಿಯುವ ನೀರು, ಆರೋಗ್ಯ ಮತ್ತಿತರ ಮೂಲ ಸೌಕರ್ಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನಾವು ಪ್ರಯತ್ನಿಸುತ್ತೇವೆ. ನಾವು ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ನಮ್ಮದೇ ಆದ ಸಿದ್ಧಾಂತದ ಮೂಲಕ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸರ್ವೋದಯ ಪಕ್ಷದ ರಾಜ್ಯ ಉಪಾಧ್ಯಕ್ಷ ಮಹೇಶ್ ಪ್ರಭು, ಮುಖಂಡರಾದ ಹೆಬ್ಬಸೂರು ಬಸವಣ್ಣ, ಶಾಂತಮಲ್ಲಪ್ಪ, ಮಹೇಶ್‌ಕುಮಾರ್, ಮಹದೇವಪ್ಪ, ಜಯಣ್ಣ ಹಾಜರಿದ್ದರು.