

ಚಾಮರಾಜನಗರ: ಬೆಲೆ ಏರಿಕೆಯಾಗಲಿ ಅಥವಾ ಇಳಿಕೆಯಾಗಲಿ ನಿರಂತರವಾಗಿ ಟೊಮ್ಯಾಟೊ ಬೆಳೆಯುತ್ತಿರುವ ಸಹೋದರಿಬ್ಬರು ಈಗ ಕೋಟ್ಯಾಧಿಪತಿಗಳು.
ಚಾಮರಾಜನಗರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಕೃಷ್ಣಶೆಟ್ಟಿ ಹಾಗೂ ರತ್ನಮ್ಮ ಎಂಬುವವರ ಇಬ್ಬರು ಪುತ್ರರಾದ ರಾಜೇಶ್ ಮತ್ತು ನಾಗೇಶ್ ತಮ್ಮ ಸ್ವಂತ 2 ಎಕರೆ ಹಾಗೂ 10 ಎಕರೆ ಜಮೀನನ್ನು ಗುತ್ತಿಗೆ ಪಡೆದು ಸಂಪೂರ್ಣ ಟೊಮ್ಯಾಟೊ ಬೆಳೆದು ಉತ್ತಮ ಆದಾಯ ಗಳಿಸಿದ್ದಾರೆ. ಮೂಲತಃ ಕೃಷಿಕರಲ್ಲದ ರಾಜೇಶ್ ಕುಟುಂಬದವರು ತಮ್ಮ ಸ್ವಂತ ಜಮೀನಿನಲ್ಲಿ ಮಳೆ ಆಶ್ರಯ ಬೆಳೆ ಹಾಕಿ ಜೀವನ ಸಾಗುತ್ತಿದ್ದರು. ಸಹೋದರರು ಎಸ್‌ಎಸ್‌ಎಲ್‌ಸಿ ಮುಗಿಸಿ ಕಾಲೇಜು ಮೆಟ್ಟಿಲು ಏರದೇ ಕೃಷಿಯಲ್ಲಿ ತೊಡಗಿಕೊಳ್ಳುವ ನಿರ್ಧಾರ ಮಾಡಿ ಸಂಪೂರ್ಣ ವ್ಯವಸಾಯಕ್ಕೆ ತೊಡಗಿಸಿಕೊಂಡರು.
ಸುಮಾರು 3-4 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸಹೋದರರು ಟೊಮ್ಯಾಟೊ ಬೆಳೆಯುವುದನ್ನೇ ರೂಢಿಯಾಗಿಸಿಕೊಂಡಿದ್ದಾರೆ.
2 ವರ್ಷಗಳ ಹಿಂದೆ ಟೊಮ್ಯಾಟೊ ಬೆಲೆ ಕಡಿಮೆ ಇದ್ದ ಕಾರಣ ಅಷ್ಟೇನೂ ಲಾಭ ಸಿಕ್ಕಿರಲಿಲ್ಲ. ಹಿಂದಿನ ವರ್ಷವೂ ಖರ್ಚು ಸಿಕ್ಕಿತ್ತೇ ಹೊರತು ಲಾಭ ಕಂಡಿರಲಿಲ್ಲ. ಆದರೂ ಟೊಮ್ಯಾಟೊ ಬೆಳೆಯುವುದನ್ನು ನಿಲ್ಲಿಸದ ಸಹೋದರರು ಜೂನ್ ತಿಂಗಳಿನಲ್ಲಿ ಸಂಪೂರ್ಣ 12 ಎಕರೆ ಜಮೀನಿನಲ್ಲಿ ಸುಮಾರು 80 ಸಾವಿರ ಪೈರನ್ನು ನಾಟಿ ಮಾಡಿದ್ದರು. ಬಿಸಿಲಿನಿಂದಾಗಿ ಸುಮಾರು 20-30 ಸಾವಿರ ಗಿಡಗಳು ಒಣಗಿ ಹೋದವು. ಉಳಿದ 50 ಸಾವಿರ ಗಿಡಗಳಿಂದ ಈಗಾಗಲೇ 50-60 ಟನ್ ಟೊಮ್ಯಾಟೊ ಕೂಯ್ಲು ಮಾಡಿದ್ದು 40 ಲಕ್ಷ ರೂ. ಸಂಪಾದಿಸಿದ್ದಾರೆ. ಇನ್ನೂ 100-150 ಟನ್ ಟೊಮ್ಯಾಟೊ ಕೂಯ್ಲು ಸಿಗುವ ಸಾಧ್ಯತೆ ಇದೆ. ಇದರಿಂದ ಸುಮಾರು 2 ಕೋಟಿ ರೂ. ಆದಾಯ ನಿರೀಕ್ಷೆ ಮಾಡಿದ್ದಾರೆ.
ಜಮೀನಿನಲ್ಲೇ ವಾಸ್ತವ್ಯ:
ಲಕ್ಷ್ಮೀಪು ಗ್ರಾಮದಲ್ಲಿ ಸ್ವಂತ ಮನೆ ಇದ್ದರೂ ಕೂಡ ಟೊಮ್ಯಾಟೊ ಕಾಯುವ ಸಲುವಾಗಿ ಸಹೋದರರು ಜಮೀನಿನಲ್ಲೇ ವಾಸ್ತವ್ಯ ಹೂಡುತ್ತಿದ್ದಾರೆ. ಸುಮಾರು 12 ಎಕರೆ ಪ್ರದೇಶವಾಗಿರುವುದರಿಂದ ಕಾಯಿ ಕೂಯ್ಲಿನ ಸಮಯದಲ್ಲಿ ಕಾವಲು ಕಾಯುವುದೇ ದೊಡ್ಡ ಸಮಸ್ಯೆಯಾಗುತ್ತದೆ. ಈ ಕಾರಣಕ್ಕೆ ಜಮೀನಿನಲ್ಲೇ ಉಳಿಯುವ ಸಹೋದರರು, ತುಂಬಾ ಕಷ್ಟಪಟ್ಟು ಬೆಳೆಯನ್ನು ಕಾಯ್ದುಕೊಂಡಿದ್ದಾರೆ. ಬಿಸಿಲು, ಮಳೆ, ರೋಗದ ಸಮಸ್ಯೆಗಳನ್ನು ಹೊರತುಪಡಿಸಿಯೂ 50 ಗಿಡಗಳು ತುಂಬಾ ಉತ್ತಮ ರೀತಿಯಲ್ಲಿ ಲ ಕೊಟ್ಟಿದೆ. ಟೊಮ್ಯಾಟೊ ಬೆಲೆ ಈಗೆಯೇ ಮುಂದುವರಿದರೆ ಮತ್ತಷ್ಟು ಲಾಭ ಪಡೆಯುವ ಸಾಧ್ಯತೆ ಇದೆ.
ಸಹೋದರರ ಸಾಧನೆ:
ರಾಜೇಶ್ ಮತ್ತು ನಾಗೇಶ್ ಎಸ್‌ಎಸ್‌ಎಲ್‌ಸಿವರೆಗೆ ಮಾತ್ರ ವಿದ್ಯಭ್ಯಾಸ ಮಾಡಿದ್ದು, ಕಾಲೇಜು ಮೆಟ್ಟಿಲು ಕೂಡ ಹತ್ತಿಲ್ಲ. ಆದರೆ ಕೃಷಿಯಲ್ಲಿ ಏನಾದರೂ ಸಾಧಿಸುವ ಛಲ ಇಟ್ಟುಕೊಂಡು ವ್ಯವಸಾಯ ಮಾಡಲು ಮುಂದಾದರು. ಕುಂಟುಂಬದ ಸಹಕಾರ ಮತ್ತು ನಿತ್ಯದ ಪರಿಶ್ರಮದಿಂದ ಬೇಸಾಯದಲ್ಲೇ ಸಾಧನೆ ಮಾಡಿ ತೋರಿಸಿದ್ದಾರೆ. ಟೊಮ್ಯಾಟೊ ಬೆಳೆದು ಕೋಟಿ ಸಂಪಾದಿಸಿದ್ದಾರೆ. ಕೃಷಿ ಎಂದರೆ ತಾತ್ಸಾರ ಮನೋಭಾವದಿಂದ ನೋಡುವವರಿಗೆ ಲಕ್ಷ್ಮೀಪುರ ಗ್ರಾಮದ ಸಹೋದರರ ಸಾಧನೆ ಸ್ಪೂರ್ತಿಯಾಗಿದೆ.