ಗೀತಾಹುಡೇದಾ ಭಾಷಾಕೌಶಲ್ಯಕ್ಕೆ ಮೆಚ್ಚುಗೆ

geethahudeda
Published on

ಚಾಮರಾಜನಗರ: ಗುಂಡ್ಲುಪೇಟೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಬಳ್ಳಾರಿ ಜಿಲ್ಲೆಗೆ ಗಡಿಪಾರು ಮಾಡಿದ್ದ, ಅಂದಿನ ಕೊಳ್ಳೇಗಾಲ ಉಪವಿಭಾಗಾಧಿಕಾರಿ ಗೀತಾ ಹುಡೇದಾ ಆದೇಶವನ್ನು ಹೈಕೊರ್ಟ್ ಎತ್ತಿ ಹಿಡಿದಿದೆ.

ಗುಂಡ್ಲುಪೇಟೆಯ ಮಹದೇವ ಪ್ರಸಾದ್ ನಗರ ನಿವಾಸಿ ಇನಾಯತ್ ಉರುಫ್ ಇನ್ನಾ ಎಂಬ ವ್ಯಕ್ತಿ ಕೊಲೆ, ಸುಲಿಗೆ, ದಬ್ಬಾಳಿಕೆ, ಗೂಂಡಾ ವರ್ತನೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಪೊಲೀಸರು ಈತನ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. ಇನಾಯತ್ ಘೋರ ಪ್ರಕರಣಗಳನ್ನು ಪರಿಗಣಿಸಿ ಅಂದಿನ ಉಪವಿಭಾಗಾಧಿಕಾರಿ ಗೀತಾ ಹುಡೇದಾ ಬಳ್ಳಾರಿ ಜಿಲ್ಲೆಗೆ ಗಡಿಪಾರು ಮಾಡಿದ್ದರು. ಇದನ್ನು ಪ್ರಶ್ನಿಸಿ ಆರೋಪಿ ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ್ದನು. ಅಂದಿನ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಆದೇಶವನ್ನು ಪ್ರಶಂಸಿದ್ದರು. ನಂತರ ಆರೋಪಿ ಈ ಆದೇಶವನ್ನು ಪ್ರಶ್ನಿಸಿ ವಕೀಲರ ಮೂಲಕ ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದನು. ಉಚ್ಚನ್ಯಾಯಾಲಯ ಅಂದಿನ ಉಪವಿಭಾಗಾಧಿಕಾರಿ ಆದೇಶವನ್ನು ಎತ್ತಿ ಹಿಡಿದಿದ್ದು, ಕೂಡಲೇ ಆದೇಶವನ್ನು ಅವರ ಸೇವಾ ಪುಸ್ತಕದಲ್ಲಿ ನಮೂದಿಸುವಂತೆ ಆದೇಶಿಸಿದ್ದಾರೆ. ಈಹಿಂದೆ ಕೊಳ್ಳೇಗಾಲದ ಉಪವಿಭಾಗಾಧಿಕಾರಿಯಾಗಿ ಹಾಗೂ ಪ್ರಸ್ತುತ ಎಡಿಸಿಯಾಗಿ ಕಾರ್ಯನಿರ್ವಹಿಸುತ್ತಿರುವ ಗೀತಾ ಹುಡೇದಾ ಭಾಷಾ ಕೌಶಲ್ಯ ಹಾಗೂ ಕರ್ತವ್ಯ ನಿಷ್ಠೆಗೆ ಸಂದ ಗೌರವ ಇದಾಗಿದೆ ಎಂಬ ಮಾತುಗಳು ಸಾರ್ವಜನಿಕ ವರ್ಗದಲ್ಲಿ ಕೇಳಿಬರುತ್ತಿದೆ.

ಭಾಷಾ ಕೌಶಲ್ಯಕ್ಕೆ ಮೆಚ್ಚುಗೆ:
ಕೊಳ್ಳೇಗಾಲದ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ಗೀತಾ ಹುಡೇದ್, ಆದೇಶದಲ್ಲಿ ಬಳಸಿರುವ ಭಾಷಾ ಕೌಶಲ್ಯತೆಗೆ ನ್ಯಾಯಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದೇಶದಲ್ಲಿ ಉಪವಿಭಾಗಾಧಿಕಾರಿ ಭಾಷಾ ಕೌಶಲ್ಯ ಬಹಳ ಉತ್ತಮವಾಗಿದೆ. ಇವರ ಭಾಷಾ ಕೌಶಲ್ಯತೆಯನ್ನು ಪ್ರಶಂಸದೆ ಹೋದರೆ, ಈ ನ್ಯಾಯಾಲಯದ ಕೆಲಸ ವಿಫಲವಾಗುತ್ತದೆ ಎಂಬ ಪ್ರಶಂಸೆಯನ್ನು ನ್ಯಾಯಮೂರ್ತಿಗಳು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಸ್ತುತ ಎಡಿಸಿ ಆಗಿರುವ ಹುಡೇದಾ:
ಕೊಳ್ಳೇಗಾಲ ಉಪವಿಭಾಗಾಧಿಕಾರಿಯಾಗಿ 1 ವರ್ಷ 26 ದಿನಗಳ ಸೇವೆ ಸಲ್ಲಿಸಿರುವ ಗೀತಾ ಹುಡೇದಾ ಪ್ರಸ್ತುತ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕಂದಾಯ ಮೇಲ್ಮನವಿ ಪ್ರಕರಣಗಳಿಗೆ ಸಂಬಂಧಿಸಿದಂತೆ 299, ಪಹಣಿಗಾಗಿ ಸಂಬಂಧಿಸಿದ 548, ಆರ್‌ಟಿಸಿ ತಿದ್ದುಪಡಿಯ 848 ಪ್ರಕರಣ ಹಾಗೂ ಇನ್ನಿತರೆ ಇಲಾಖೆಗೆ ಸಂಬಂಧಿಸಿದ ಅನೇಕ ಪ್ರಕರಣಗಳನ್ನು ತಮ್ಮ ಅಧಿಕಾರದ ಅವಧಿಯಲ್ಲಿ ವಿಲೇವಾರಿ ಮಾಡುವ ಮೂಲಕ ಜನರ ವಿಶ್ವಾಸಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net