

ಚಾಮರಾಜನಗರ: ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಸಂಬಂಧ ಸಿದ್ದತೆಗಳ ಪರಿಶೀಲನೆ ನಡೆಸಿದರು.
ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನ ಆಚರಣೆಗೆ ಕೈಗೊಳ್ಳುತ್ತಿರುವ ಸಿದ್ದತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲಿಸಿ, ವಿಶಾಲವಾದ ಶಾಮಿಯನ ಹಾಕಬೇಕು. ಮಕ್ಕಳಿಗೆ ಬಿಸಿಲು ತಾಗದಂತೆ ನೆರಳಿನ ವ್ಯವಸ್ಥೆ ಇರಬೇಕು. ವೇದಿಕೆ ನಿರ್ಮಾಣ, ಹೂವಿನ ಅಲಂಕಾರ, ಆಸನಗಳ ವ್ಯವಸ್ಥೆ ಸಮರ್ಪಕವಾಗಿ ಇರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಷ್ಠಾಚಾರ ಪಾಲನೆಯಾಗಬೇಕು. ಈ ನಿಟ್ಟಿನಲ್ಲಿ ಪೂರಕವಾಗಿರುವ ಸಿದ್ದತಾ ವ್ಯವಸ್ಥೆಗಳನ್ನು ಮಾಡಬೇಕು. ಪಥಸಂಚಲನ, ದೇಶಭಕ್ತಿ, ಸ್ವಾತಂತ್ರ್ಯ ಇತಿಹಾಸ ಬಿಂಬಿಸುವ ವಿದ್ಯಾರ್ಥಿಗಳ ಕಾರ್ಯಕ್ರಮಗಳ ಆಯೋಜನೆಗೆ ಅವಶ್ಯವಿರುವ ಎಲ್ಲ ಅನುಕೂಲಗಳನ್ನು ಕಲ್ಪಿಸಬೇಕು. ಸ್ವಚ್ಚತೆ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಸ್ವಾತಂತ್ರ್ಯ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಲು ನೇಮಕವಾಗಿರುವ ವಿವಿಧ ಸಮಿತಿಗಳು ಸೂಚಿಸಲಾಗಿರುವ ಕೆಲಸಗಳನ್ನು ಹೊಣೆಗಾರಿಕೆಯಿಂದ ಪೂರೈಸಬೇಕು. ಎಲ್ಲಾ ಸಿದ್ದತಾ ಕಾರ್ಯಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ತಹಶೀಲ್ದಾರ್ ಗಿರಿಜಾ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಎಸ್. ಮಹೇಶ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಸುಧಾ, ನಗರಸಭೆ ಆಯುಕ್ತ ಎಸ್.ವಿ. ರಾಮದಾಸ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಿವಾಜಿ ಪವಾರ್ ಹಾಜರಿದ್ದರು.