

ಚಾಮರಾಜನಗರ: ವಿದ್ಯಾರ್ಥಿನಿಯರು ರಾಷ್ಟ್ರೀಯ ಸೇವಾ ಯೋಜನೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದು ಚಾಮರಾಜನಗರ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಂ.ಆರ್.ಗಂಗಾಧರ್ ಸಲಹೆ ನೀಡಿದರು.
ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗ ಮಂದಿರದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವತಿಯಿಂದ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೆ ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇತ್ತು, ಆದರೆ ಆ ವಾತಾವರಣ ಇಂದು ಬದಲಾಗಿದೆ. ಶೈಕ್ಷಣಿಕವಾಗಿ ಒಂದು ನಿರ್ಧಿಷ್ಟವಾದ ಗುರಿಯನ್ನು ಇಟ್ಟುಕೊಂಡು ಹೆಣ್ಣು ಮಕ್ಕಳು ಸಾಗಬೇಕು. ಐಎಎಸ್, ಐಪಿಎಸ್ ನಂತಹ ಉನ್ನತ ಹುದ್ದೆಗಳಿಗೆ ಹೋಗಲು ಪ್ರಯತ್ನಿಸಬೇಕು. ಒಂದು ಕುಟುಂಬದಲ್ಲಿ ಹೆಣ್ಣು ಮಗಳು ವಿದ್ಯಾಭ್ಯಾಸ ಕಲಿತರೆ, ಇಡೀ ಕುಟುಂಬವೇ ಉನ್ನತಿ ಸಾಧಿಸಿದಂತಾಗುತ್ತದೆ. ವಿದಯಾರ್ಥಿನಿಯರು ಪಾಠ ಪ್ರವಚನದ ಜೊತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಮಹಿಳಾ ಕಾಲೇಜು ಇತ್ತೀಚೆಗೆ ನ್ಯಾಕ್ ಕಮಿಟಿಯಿಂದ ‘ಬಿ’ ಗ್ರೇಡ್ ಪಡೆದುಕೊಂಡಿದೆ. ಇದು ಕಾಲೇಜಿನ ಬೋಧಕ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳ ಪರಿಶ್ರಮಕ್ಕ ಸಂದ ಗೌರವ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸ್ತುತ ಜಿಲ್ಲೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿದೆ. ಈ ಭಾಗದ ಹೆಣ್ಣು ಮಕ್ಕಳು ಕಲಿಕೆಯಷ್ಟೇ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮುಂದಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಹೆಣ್ಣು ಇರಬೇಕು ಎಂಬ ಭಾವನೆ ಬದಲಾಗಿದೆ. ದೇಶದ ಪ್ರಗತಿಯಲ್ಲಿ ಹೆಣ್ಣು ಮಕ್ಕಳು ಪುರುಷರಷ್ಟೇ ಸರಿಸಮನಾಗಿ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಕೆಲವು ಮೌಢ್ಯ ಇನ್ನು ಜೀವಂತವಾಗಿದೆ. ಅಂತಹ ಮೌಢ್ಯಗಳನ್ನು ಹೋಗಲಾಡಿಸಲು ಶಿಕ್ಷಣವೇ ಪ್ರಬಲ ಅಸ್ತ್ರವಾಗಿದೆ ಎಂದರು.
ಪ್ರಸ್ತುತ ಉದ್ಯೋಗ ಅವಕಾಶಗಳು ಕಡಿಮೆಯಾಗಿದೆ, ಉನ್ನತ ಶಿಕ್ಷಣಕ್ಕೆ ಹೋಗಲು ಅನೇಕ ಅವಕಾಶಗಳಿದ್ದು ಅದನ್ನು ಬಳಸಿಕೊಳ್ಳಬೇಕು. ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಪಡೆದರೆ ರಾಜಕೀಯ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಸಾಧ್ಯವಾಗುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರದಿಂದ ಮತ್ತಷ್ಟು ಪ್ರಾಮುಖ್ಯತೆ ಬೇಕಾಗಿದೆ.ತುಂಬಾ ಪ್ರತಿಭೆ ಇರುವಂತಹ ಹೆಣ್ಣುಮಕ್ಕಳು ಸಾಕಷ್ಟು ಮೂಲಸೌಕರ್ಯ ಸಮಸ್ಯೆಗಳಿಂದ ಶಿಕ್ಷಣದಿಂದ ದೂರಾಗುತ್ತಾರೆ. ಹೆಣ್ಣು ಮಕ್ಕಳಿಗೆ ಅವಕಾಶವನ್ನು ನೀಡಬೇಕು. ನಿರಂತರವಾಗಿ ವಿದ್ಯಾಭ್ಯಾಸ ಮುಂದುವರಿಸಿದರೆ ಸಾಧನೆ ಸುಲಭ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಎಂ.ಆರ್.ಸುಮತಿ, ಐಕ್ಯೂಎಸಿ ಸಂಚಾಲಕ ಪಿ.ಬಾಲಸುಬ್ರಮ್ಮಣ್ಯ, ಸಾಂಸ್ಕೃತಿಕ ಹಾಗೂ ಎಎಸ್‌ಎಸ್ ಸಮಿತಿ ಸಂಚಾಲಕಿ ಡಾ.ಎಂ.ಸಿ.ಪ್ರಭಾವತಿ, ಕ್ರೀಡಾ ಸಮಿತಿಯ ಎ.ಎಂ.ಪವನ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕಿ ಡಾ.ಎಚ್.ಎಸ್.ರುಕ್ಮಿಣಿ, ಡಾ.ಮಂಜುನಾಥ್, ಉಪನ್ಯಾಸಕ ಬಸವಣ್ಣ ಮೂಕಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.