ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಅತ್ಯಗತ್ಯ

22raju12
Published on

ಚಾಮರಾಜನಗರ: ಸರ್ಕಾರಗಳು ಎಷ್ಟೇ ಕಠಿಣ ಕಾನೂನುಗಳನ್ನು ಜಾರಿಗೆ ತಂದರು, ಬಾಲ್ಯ ವಿವಾಹ ಮತ್ತು ಪೋಕ್ಸೊ ಪ್ರಕರಣಗಳು ಹೆಚ್ಚಳವಾಗುತ್ತಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಚಂದಕವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಓದುವ ಹಂತದಲ್ಲೇ ದೈನಂದಿನ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಕನೂನಿನ ಅರಿವು ಬೆಳೆಸಿಕೊಳ್ಳಬೇಕು. ಸಾಮಾಜಿಕ ಜಾಲ ತಾಣಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ಪ್ರೀತಿ-ಪ್ರೇಮಕ್ಕೆ ಸಿಲುಕಿ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು.
ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಇಲ್ಲದಿದ್ದಲ್ಲಿ ವಿದ್ಯಾರ್ಥಿಗಳ ಭವಿಷ್ಯ ನಶಿಸಿಹೋಗುತ್ತದೆ. ಈ ನಿಟ್ಟಿನಲ್ಲಿ ಯುವ ಜನಾಂಗ ವಿದ್ಯಾರ್ಥಿ ದೆಸೆಯಿಂದಲೇ ಕಾನೂನಿನ ಜ್ಞಾನ ಹೊಂದುವುದು ಅತ್ಯವಶ್ಯಕವಾಗಿದೆ ಎಂದರು.

ಭಾರತದ ಸಂವಿಧಾನದ ಪರಿಚ್ಟೇಧ 21ರಲ್ಲಿ ಮಕ್ಕಳ ರಕ್ಷಣೆ ಬಗ್ಗೆ ತಿಳಿಸಲಾಗಿದೆ. ಮಕ್ಕಳ ರಕ್ಷಣೆ ಪ್ರತಿಯೊಬ್ಬರ ನಾಗರೀಕರ ಜವಬ್ದಾರಿಯಾಗಿದೆ. ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳಿವೆ. ಮೂಲಭೂತ ಕರ್ತವ್ಯಗಳನ್ನು ಪಾಲನೆ ಮಾಡಿದರೆ, ಹಕ್ಕುಗಳು ತಾನಾಗಿಯೇ ಲಭಿಸುತ್ತವೆ. ಆ ಕಾರಣ ಸಮಾಜದ ಪ್ರತಿಯೊಬ್ಬರೂ ಡಾ. ಬಿ.ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನವನ್ನು ಓದುವುದರ ಜತೆಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವೃತ್ತ ನಿರೀಕ್ಷಕ ಶ್ರೀಕಾಂತ್ ಮಾತನಾಡಿ, ಇಂದಿನ ಯುವ ಪೀಳಿಗೆ ಹಲವು ದುಶ್ಚಟಗಳಿಗೆ ಮಾರುಹೋಗಿ ತಮ್ಮ ಅಮೂಲ್ಯವಾದ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಸಮಯದಲ್ಲಿ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು, ಇದರಿಂದ ಪೋಷಕರು ಹಾಗೂ ಪೋಲೀಸ್ ಇಲಾಖೆಗೆ ದೊಡ್ಡ ಸಮಸ್ಯೆಯಾಗುತ್ತಿದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಮುಂದಿನ ಯುವ ಪೀಳಿಗೆ ಜಾಗೃತರಾಗಬೇಕು. ಇಂತಹ ದುಷ್ಕೃತ್ಯಗಳ ಬಗ್ಗೆ ಮಾಹಿತಿ ಇದ್ದಲ್ಲಿ ಸ್ಥಳೀಯ ಪೋಲೀಸ್ ಠಾಣೆಗೆ ತಿಳಿಸಿದರೆ, ಅಪರಾಧ ಕೃತ್ಯಗಳನ್ನು ತಡೆಯುವಲ್ಲಿ ಪೋಲೀಸ್ ಇಲಾಖೆ ಸದಾ ಸಿದ್ದರಾಗಿರುತ್ತೇವೆ ಎಂದರು.

ಕಾಲೇಜಿನ ಪ್ರಾಂಶುಪಾಲ ಎಚ್.ಎನ್. ಸ್ವಾಮಿ, ಉಪನ್ಯಾಸಕ ನಟರಾಜು, ಪ್ರಭುಸ್ವಾಮಿ, ಡಿ.ಶಕುಂತಲಾ, ಉಪ ಪೋಲೀಸ್ ನಿರೀಕ್ಷಕ ಕೆ.ಸಿ.ಮಹೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net