

ಚಾಮರಾಜನಗರ: ಮಣಿಪುರದಲ್ಲಿ ಇಬ್ಬರು ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರವನ್ನು ಖಂಡಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಸಂಘಟನೆಯ ಕಚೇರಿ ಮುಂಭಾಗ ಸೇರಿದ ವಿದ್ಯಾರ್ಥಿಗಳು ಭಿತ್ತಿ ಪತ್ರವಿಡಿದು, ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕಿ ಆಸಿಯಾ ಬೇಗಂ ಮಾತನಾಡಿ, ಸಮುದಾಯದ ಹೆಸರಿನಲ್ಲಿ ಜನಗಳ ಸಾಮೂಹಿಕ ಹತ್ಯೆ, ದಾಳಿಗಳು, ಅತ್ಯಾಚಾರ, ಗುಂಪು ಅತ್ಯಾಚಾರ ಇವುಗಳು ಮಣಿಪುರದಲ್ಲಿ ಕಳೆದ ಎರಡು ತಿಂಗಳುಗಳಿಂದ ಎಡೆಬಿಡದೆ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ನೀತಿಗಳು, ಸಮುದಾಯಗಳ ನಡುವೆ ವಿಭಜನೆಯನ್ನು ಉಂಟು ಮಾಡಿದೆ. ಇಬ್ಬರು ಹೆಣ್ಣು ಮಕ್ಕಳನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ದೇಶದ ಜನ ಆಘಾತಕ್ಕೆ ಒಳಗಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಅಮಾನವೀಯ ನಡವಳಿಕೆಗೆ ತುತ್ತಾದ ಹೆಣ್ಣುಮಗಳು, ಈ ಘಟನೆ ನಡೆಯುವಾಗ ನಮಗೆ ಪೊಲೀಸರಿಂದ ಸಹಾಯ ಸಿಗಲಿಲ್ಲ ಬದಲಿಗೆ, ಆರೋಪಿಗಳ ಕೈಗೆ ಅವರೇ ನಮ್ಮನ್ನು ಒಪ್ಪಿಸಿದರು ಎಂದು ಅತ್ಯಂತ ನೋವಿನಿಂದ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಮಣಿಪುರದಲ್ಲಿ ನಡೆಯುತ್ತಿರುವ ಗಲಭೆಯನ್ನು ಆದಷ್ಟು ಬೇಗ ನಿಲ್ಲಿಸುವಂತೆ ಕೇಂದ್ರಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಸದಸ್ಯ ಗೌತಮ್, ನಂದೀಶ್, ಸಂಜಯ್, ನಿಖಿಲ್, ದೀಕ್ಷಿತ್ ನಾಯಕ್, ಚಂದು , ವಿಕಾಸ್, ಮಹೇಶ್, ಹರೀಶ್ ಭಾಗವಹಿಸಿದರು.