ಚಿರತೆ ಭಯದಿಂದ ಮನೆಯಲ್ಲೇ ಉಳಿದ ಮಕ್ಕಳು!

21 HANUR 1
Published on

ಹನೂರು: ಮಕ್ಕಳನ್ನು ಶಾಲೆಯತ್ತ ಸೆಳೆಯಲು ಸರ್ಕಾರ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಆದರೂ ಕೆಲವೆಡೆ ಪಾಲಕರ ಬಡತನ, ಅಜ್ಞಾನ, ಅನಕ್ಷರತೆಯಿಂದಾಗಿ ಮಕ್ಕಳು ಸ್ಕೂಲ್‌ಗೆ ಹೋಗದಿರುವುದನ್ನು ಕಾಣಬಹುದು. ಆದರೆ ಇಲ್ಲೊಂದು ಗ್ರಾಮದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗದಿರಲು ಕಾರಣ ಬೇರೆಯೇ ಇದೆ. ಅದೇನೆಂದರೆ, ‘ಚಿರತೆ’!

ತಾಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ ಕಳೆದ ಜೂ. 26ರಂದು 6 ವರ್ಷದ ಬಾಲಕಿ ಸುಶೀಲಾ ಎಂಬಾಕೆಯ ಮೇಲೆ ಚಿರತೆ ದಾಳಿ ಮಾಡಿತ್ತು. ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಇತ್ತೀಚೆಗೆ ಮೃತಪಟ್ಟಳು. ಈ ಘಟನೆ ನಡೆದ ಬಳಿಕ ಚಿರತೆಯ ಭಯ ಗ್ರಾಮವನ್ನು ಆವರಿಸಿಬಿಟ್ಟಿತು. ಪರಿಣಾಮ, ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಲೇ ಇಲ್ಲ.

ಗ್ರಾಮದಲ್ಲಿ ಸುಮಾರು 45 ಕುಟುಂಬಗಳು ವಾಸವಿದ್ದು, ಊರಿನಲ್ಲೇ ಕಿರಿಯ ಪ್ರಾಥಮಿಕ ಶಾಲೆ ಇದೆ. ಈ ಶಾಲೆಗೆ ಮಕ್ಕಳು ಹಾಜರಾಗುತ್ತಿದ್ದಾರೆ. ಆದರೆ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆ ಸಮೀಪದ ಕಂಡಯ್ಯನಪಾಳ್ಯ ಮತ್ತು ಲೊಕ್ಕನಹಳ್ಳಿಗೆ ಹೋಗಬೇಕಿದೆ. ಮನೆಯಿಂದ ಶಾಲೆಗೆ 3 ಕಿ.ಮೀ. ಅಂತರವಿದ್ದು, ಗ್ರಾಮ ಕಾಡಂಚಿನಲ್ಲಿರುವುದರಿಂದ ವಾಹನಗಳ ಸೌಲಭ್ಯವಿಲ್ಲ. ಆದ್ದರಿಂದ ಮಕ್ಕಳು ಶಾಲೆಗೆ ನಡೆದುಕೊಂಡು ಹೋಗುವಾಗ ಚಿರತೆ ದಾಳಿ ಮಾಡಬಹುದೆಂಬ ಭೀತಿ ಪಾಲಕರ ಎದೆ ಬಡಿತವನ್ನು ಹೆಚ್ಚಿಸಿದೆ.

ಈ ಕಾರಣದಿಂದ ಕಂಡಯ್ಯನಪಾಳ್ಯ ಹಾಗೂ ಲೊಕ್ಕನಹಳ್ಳಿ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ 6 ವಿದ್ಯಾರ್ಥಿಗಳೂ (ಚಂದ್ರು, ನಂದಿತಾ, ಬಸಮ್ಮ, ಪಾರ್ವತಿ, ಚಿತ್ರಾ, ಕುಮಾರ) ಶಾಲೆಗೆ ಹೋಗದೆ ಮನೆಯಲ್ಲೇ ಉಳಿದಿದ್ದಾರೆ. ಮತ್ತೊಂದೆಡೆ, ಗ್ರಾಮದ ಕೆಲವರು ಚಿರತೆ ಭೀತಿಯಿಂದಾಗಿಯೇ ಕೂಲಿ ಕೆಲಸಕ್ಕೂ ತೆರಳದೆ ಮನೆಯಲ್ಲೇ ಇದ್ದಾರೆ. ಜೀವನ ನಿರ್ವಹಣೆಯ ಅನಿವಾರ್ಯತೆಯಿಂದ ಧೈರ್ಯ ಮಾಡಿ ಕೆಲಸಕ್ಕೆ ಹೋಗುತ್ತಿರುವವರು ಕತ್ತಲಾಗುವ ಮೊದಲು ಮನೆ ಸೇರಿಕೊಳ್ಳುತ್ತಿದ್ದಾರೆ

ನನ್ನ ಕಂದನಿಗಾದ ಸ್ಥಿತಿ ಬೇರೆ ಮಕ್ಕಳಿಗೆ ಬಾರದಿರಲಿ:
ಮಗಳು ಸುಶೀಲಾಳನ್ನು ಕಳೆದುಕೊಂಡಿರುವ ತಂದೆ ರಾಮು ಅವರ ದುಃಖ ಹೇಳತೀರದರು. ಆವತ್ತು ರಾತ್ರಿ ಮನೆಯ ಮುಂದೆ ಮೊಬೈಲ್ ನೋಡುತ್ತ ಕುಳಿತಿದ್ದ ನನ್ನ ಮಗಳು ಸುಶೀಲಾಳ ಮೇಲೆ ಚಿರತೆ ದಾಳಿ ಮಾಡಿತು. ನನ್ನ ಕಣ್ಣೆದುರಲ್ಲೇ ಮಗಳನ್ನು ಹೊತ್ತೊಯ್ಯಲು ಪ್ರಯತ್ನಿಸಿತು. ಹೇಗೋ ಮಾಡಿ ಚಿರತೆಯಿಂದ ಮಗಳನ್ನು ಪಾರು ಮಾಡಿ ಆಸ್ಪತ್ರೆಗೆ ದಾಖಲಿಸಿದೆ. ಆದರೆ ಅವಳು ಬದುಕುಳಿಯಲಿಲ್ಲ. ಗ್ರಾಮದಿಂದ ಶಾಲೆಗೆ ಹೋಗುವ ಮಕ್ಕಳಿಗೆ ವಾಹನ ಸೌಲಭ್ಯ ಕಲ್ಪಿಸಿಕೊಡಿ. ನನ್ನ ಕಂದನಿಗಾದ ಸ್ಥಿತಿ ಬೇರೆ ಮಕ್ಕಳಿಗೆ ಬಾರದಿರಲಿ ಎಂದು ಸುಶೀಳಾಳ ತಂದೆ ರಾಮು ವಿನಂತಿಸುತ್ತಾರೆ.

ಚಿರತೆ ಕಾರ್ಯಾಚರಣೆ:
ಕೊಳ್ಳೇಗಾಲದ ಸಿದ್ದೇಶ್ವರ ಬೆಟ್ಟದ ಬಳಿ ಬೋನಿಗೆ ಬಿದ್ದ ಚಿರತೆ ಮತ್ತು ಕಗ್ಗಲಿಗುಂದಿಯಲ್ಲಿ ಬಾಲಕಿಯನ್ನು ಬಲಿ ಪಡೆದ ಚಿರತೆ ಒಂದೇ ಎಂಬುದನ್ನು ಅರಣ್ಯ ಇಲಾಖೆ ಇನ್ನೂ ಖಚಿತಪಡಿಸಿಲ್ಲ. ಇತ್ತೀಚಿಗೆ ಕಾಮಗೆರೆ ಗ್ರಾಮದಲ್ಲಿ ಎರಡು ಹಸುಗಳ ಮೇಲೆ ದಾಳಿ ಮಾಡಿದ್ದ ಚಿರತೆ ಬೂದಿಪಡಗ ಪ್ರದೇಶದಲ್ಲಿ ಸಂಚರಿಸುತ್ತಿದೆ. ಇದನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಡಿಆರ್‌ಎ್ಒ ಪ್ರಭು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಒಂದು ತಿಂಗಳು ಕಳೆಯುತ್ತ ಬಂದಿದ್ದರೂ ಅರಣ್ಯ ಇಲಾಖೆ ಇನ್ನೂ ಚಿರತೆ ಸೆರೆ ಹಿಡಿದಿಲ್ಲ. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹೆದರುತ್ತಿದ್ದಾರೆ.-ಚಿಕ್ಕರಂಗಮ್ಮ, ಗ್ರಾಮಸ್ಥೆ ಚಿರತೆ ದಾಳಿಯಿಂದ ಸುಶೀಳಾ ಮೃತಪಟ್ಟಿರುವುದರಿಂದ ಭಯವಾಗಿದೆ. ಹಾಗಾಗಿ, ನಮ್ಮಪ್ಪ ನನ್ನನ್ನು ಶಾಲೆಗೆ ಕಳುಹಿಸುತ್ತಿಲ್ಲ.-ಚಂದ್ರು, 6ನೇ ತರಗತಿ ವಿದ್ಯಾರ್ಥಿ ಮಕ್ಕಳನ್ನು ಶಾಲೆಗೆ ಕಳುಹಿಸದಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಸಿಆರ್‌ಪಿ ಮೂಲಕ ಪಾಲಕರನ್ನು ಮನವೊಲಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಅಗತ್ಯ ಕ್ರಮ ವಹಿಸಲಾಗುವುದು.-ಶಿವರಾಜು, ಬಿಇಒ, ಹನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net