39.56 ಲಕ್ಷ ರೂ. ಮೌಲ್ಯದ ಮದ್ಯ ವಶ

10raju2
Published on

ಚಾಮರಾಜನಗರ: ಕಂಟ್ರೋಲಿಂಗ್ ಅಬಕಾರಿ ಭದ್ರತಾ ಚೀಟಿಗಳು ಇಲ್ಲದಿರುವುದು ಕಂಡುಬಂದ ಹಿನ್ನೆಲೆಯಲ್ಲಿ 39,56,468 ರೂ. ಮೌಲ್ಯದ 5481 ಲೀಟರ್ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.


ಏ.8ರಂದು ನಗರದ ಕೆ.ಎಸ್.ಬಿ.ಸಿ.ಎಲ್. ಡಿಪೋಗೆ ಚಿಕ್ಕಬಳ್ಳಾಪುರದ ಬ್ಲೂ ಏಷಿಯನ್ ಬ್ರೆವರೇಜಸ್ ಲಿಮಿಟೆಡ್‌ನಿಂದ ಸರಬರಾಜಾದ 630 ಪೆಟ್ಟಿಗೆಗಳ ಪೈಕಿ 5 ಪೆಟ್ಟಿಗೆಗಳಲ್ಲಿ ಇನ್ನರ್ ಕಾರ್ಟನ್ ಬಾಕ್ಸ್‌ನ ಕಂಟ್ರೋಲಿಂಗ್ ಅಬಕಾರಿ ಭದ್ರತಾ ಚೀಟಿಗಳು ಇಲ್ಲದೇ ಇರುವುದು ಕಂಡುಬಂತು. ಈ ಹಿನ್ನೆಲೆಯಲ್ಲಿ ಒಟ್ಟಾರೆ 5481 ಲೀಟರ್ ಮದ್ಯವನ್ನು ವಶಕ್ಕೆ ಪಡೆದು ಡಿಸ್ಟಿಲರಿ ಸನ್ನದುದಾರರು ಹಾಗೂ ಚಾಲಕರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ.


ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ (ಜಾರಿ ಮತ್ತು ತನಿಖೆ) ನಿರ್ದೆಶನದ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು. ಅಬಕಾರಿ ಉಪ ಆಯುಕ್ತ ಆರ್. ನಾಗಶಯನ, ಉಪ ಅಧೀಕ್ಷಕ ಎಂ.ಡಿ.ಮೋಹನ್‌ಕುಮಾರ್, ನಿರೀಕ್ಷಕರಾದ ಮೀನಾ, ಗುರುನಾಥಶೆಟ್ಟಿ, ಕೆ.ಎಸ್.ಬಿ.ಸಿ.ಎಲ್. ಡಿಪೋ ವ್ಯವಸ್ಥಾಪಕ ಬಸವರಾಜು ಮತ್ತು ಅಬಕಾರಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


ಮದ್ಯ, ವಾಹನ ವಶ: ತಾಲೂಕಿನ ಬಿಸಲವಾಡಿ ಗ್ರಾಮ ವ್ಯಾಪ್ತಿ ಗಸ್ತು ನಡೆಸುತ್ತಿದ್ದ ವೇಳೆ ಅಕ್ರಮವಾಗಿ ಸಾಗಿಸುತ್ತಿದ್ದ 9 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿರುವ ಅಬಕಾರಿ ಇಲಾಖೆ ಅಧಿಕಾರಿಗಳು, ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಭಾನುವಾರ ರಾತ್ರಿ 9 ಗಂಟೆ ಸಮಯದಲ್ಲಿ ಈರೋಡ್ ಜಿಲ್ಲೆ ಸತ್ತಿ ತಾಲೂಕಿನ ಕಾಮಯನಪುರದ ವೆಂಕಟರಾಜು ಎಂಬಾತ ಟಾಟಾ ಏಸ್ ವಾಹನದಲ್ಲಿ 9 ಲೀಟರ್ ಮದ್ಯವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದದ್ದು ಕಂಡುಬಂತು. ಮದ್ಯವನ್ನು ವಶಪಡಿಸಿಕೊಂಡು ಆರೋಪಿ ವಿರುದ್ಧ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಮದ್ಯ ಮತ್ತು ವಾಹನದ ಒಟ್ಟು ಮೌಲ್ಯ 2,03,512 ರೂ.
ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ), ಚಾಮರಾಜನಗರ ಜಿಲ್ಲಾ ಅಬಕಾರಿ ಉಪಆಯುಕ್ತರ ಮಾರ್ಗದರ್ಶನದಲ್ಲಿ ವಲಯದ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಪ್ರಕರಣ ಕಂಡುಬಂದಿದೆ ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net