

ಚಾಮರಾಜನಗರ: ನಗರಸಭೆ ವ್ಯಾಪ್ತಿಯಲ್ಲಿ ಮನೆ-ಮನೆಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಚಾಲನೆ ದೊರೆತಿದ್ದು, ಅಂದುಕೊಂಡಂತೆ ಎಲ್ಲವೂ ಪೂರ್ಣಗೊಂಡರೆ ನಗರದ ನಿವಾಸಿಗಳು ಗ್ಯಾಸ್ ಬುಕ್ಕಿಂಗ್ ಮಾಡಿ ಕಾಯುವುದಕ್ಕೆ ಮುಕ್ತಿ ದೊರೆಯಲಿದೆ.
ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮಹಾತ್ವಾಕಾಂಕ್ಷಿ ಯೋಜನೆಯಂತೆ ಜೂ.21ರಿಂದ ನಗರದಲ್ಲಿ ಮನೆ-ಮನೆಗೆ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ. ನಗರಸಭೆ ವ್ಯಾಪ್ತಿಯ ವಾರ್ಡ್ ನಂ. 10, 15 ಮತ್ತು 26ರಲ್ಲಿ ಪ್ರಾಯೋಗಿಕ ಕಾಮಗಾರಿ ಪ್ರಗತಿಯಲ್ಲಿದೆ.
ಎಜಿ ಆ್ಯಂಡ್ ಪಿ ಪ್ರಥಮ್ ಕಂಪನಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಶಬ್ನಮ್ ಕನ್ಸ್‌ಟ್ರಕ್ಷನ್ ಮೂಲಕ 3 ಬಡಾವಣೆಗಳಲ್ಲಿ ಮನೆಗಳಿಗೆ ಗ್ಯಾಸ್ ಸಂಪರ್ಕದ ನೋಂದಣಿ ಹಾಗೂ ಪೈಪ್‌ಲೈನ್ ಅಳವಡಿಕೆ ಕಾರ್ಯವನ್ನು ಸಿಬ್ಬಂದಿ ಕೈಗೊಂಡಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ 1 ವರ್ಷದಲ್ಲಿ ಕಾಮಗಾರಿ ಮುಕ್ತಾಯ ಮಾಡುವ ಗುರಿ ಹೊಂದಿದ್ದು, ಗ್ರಾಹಕರ ಬೇಡಿಕೆ ಮತ್ತು ನಗರಸಭೆ ಅನುಮತಿಯ ಅನುಸಾರ ಹಂತ ಹಂತವಾಗಿ ಕಾಮಗಾರಿ ನಡೆಯಲಿದೆ. ಸಂಪೂರ್ಣವಾಗಿ ನಗರದಾದ್ಯಂತ ಗ್ಯಾಸ್ ಸಂಪರ್ಕ ಕಲ್ಪಿಸಲಾಗುವುದು ಎಂದು ಶಬ್ನಮ್ ಕನ್ಸ್‌ಟ್ರಕ್ಷನ್ ವ್ಯವಸ್ಥಾಪಕ ಕುಸ್ರೂ ‘ವಿಜಯವಾಣಿ’ಗೆ ಮಾಹಿತಿ ನೀಡಿದರು.
ಪೈಪ್ಡ್ ನ್ಯಾಚುರಲ್ ಗ್ಯಾಸ್(ಪಿಎನ್‌ಜಿ) ಮನೆಗಳಿಗೆ ಸಂಪರ್ಕ ನೀಡುವಂಥದ್ದಾಗಿದ್ದು, ಕಾಮಗಾರಿ ನಡೆಸುವ ಕಂಪನಿಯವರು ನಗರಸಭೆಗೆ 1 ಮೀಟರ್‌ಗೆ 13-15 ರೂ. ಅಭಿವೃದ್ಧಿ ಶುಲ್ಕ ಕಟ್ಟಿ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. 100 ಮೀ. ಪೈಪ್‌ಲೈನ್‌ಗೆ 5-6 ಮನೆಗಳು ಬರಲಿದ್ದು, ನೋಂದಾಯಿಸಿಕೊಂಡ ಗ್ರಾಹಕರಿಗೆ ಅಗತ್ಯವಾಗಿ ಅಡುಗೆ ಅನಿಲ ಪೂರೈಕೆ ಮಾಡಲಾಗುತ್ತದೆ. ನಗರದ ಒಟ್ಟು 33 ವಾರ್ಡ್‌ಗಳಲ್ಲೂ ಕಾಮಗಾರಿ ನಡೆಸಲಾಗುವುದು ಎಂದು ವಿವರಣೆ ನೀಡಿದರು.
ನಗರಸಭೆಗೂ ಆದಾಯ:
ಮನೆ ಮನೆಗೆ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಯೋಜನೆಯಿಂದ ನಗರಸಭೆಗೆ ಆದಾಯ ಬರಲಿದೆ. 1 ಮೀಟರ್ ಕಾಮಗಾರಿಗೆ 13-15 ರೂ. ಅಭಿವೃದ್ಧಿ ಶುಲ್ಕವನ್ನು ಕಂಪನಿ ಪಾವತಿಸಬೇಕಿದೆ. ಈಗಾಗಲೇ ಮೊದಲ ಹಂತದ ಕಾಮಗಾರಿಯ 30-35 ಲಕ್ಷ ರೂ. ಅಭಿವೃದ್ಧಿ ಶುಲ್ಕವನ್ನು ಕಂಪನಿ ನಗರಸಭೆಗೆ ಪಾವತಿಸಿದೆ. ಮುಂದಿನ ಹಂತದ ಕಾಮಗಾರಿ ಪ್ರಾರಂಭಕ್ಕೂ ಮುನ್ನ ಅಭಿವೃದ್ಧಿ ಶುಲ್ಕ ಪಾವತಿ ಮಾಡುವುದರಿಂದ ನಗರಸಭೆಯ ಆದಾಯಕ್ಕೆ ಅನುಕೂಲವಾಗುತ್ತದೆ. ಗ್ರಾಹಕರಿಗೂ ಈ ಯೋಜನೆ ಪ್ರಯೋಜನಕಾರಿಯಾಗಿದೆ ಎಂದು ನಗರಸಭೆಯ ಪೌರಾಯುಕ್ತ ರಾಮದಾಸ್ ವಿಜಯವಾಣಿಗೆ ಮಾಹಿತಿ ನೀಡಿದರು.
ಸ್ಟೋರೇಜ್ ಟ್ಯಾಂಕ್ ಸ್ಥಾಪನೆ:
ಮನೆ ಮನೆಗೆ ಅಡುಗೆ ಅನಿಲ ಪೂರೈಸಲು ಪೈಪ್‌ಲೈನ್ ಮೂಲಕ ಸಂಪರ್ಕ ಒದಗಿಸಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡ ನಂತರ ನಗರದ ಹೊರ ವಲಯದಲ್ಲಿ ಜಾಗ ಗುರುತಿಸಿ ಗ್ಯಾಸ್ ಸ್ಟೋರೇಜ್ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತದೆ. ಇದರ ಮೂಲಕವೇ ಗ್ರಾಹಕರಿಗೆ ಅಡುಗೆ ಅನಿಲ ಪೂರೈಕೆ ಮಾಡಲಾಗುತ್ತದೆ. ಇದರಿಂದ ಸಿಲಿಂಡರ್ ರಹಿತ ಗ್ಯಾಸ್, ಗ್ರಾಹಕರ ಮನೆಯ ಅಡುಗೆ ಕೋಣೆಗೆ ನೇರವಾಗಿ ಲಭ್ಯವಾಗುತ್ತದೆ. ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯವಾದ ನಂತರ ಸರ್ಕಾರದ ಅನುಮತಿಯಂತೆ ಗ್ರಾಹಕರಿಗೆ ಪೈಪ್‌ಲೈನ್ ಮೂಲಕ ಗ್ಯಾಸ್ ದೊರೆಯುತ್ತದೆ ಎಂದು ಕಂಪನಿ ಸಿಬ್ಬಂದಿ ‘ವಿಜಯವಾಣಿ’ಗೆ ಮಾಹಿತಿ ನೀಡಿದರು.
ಎಚ್ಚರಿಕೆ ಅಗತ್ಯ:
ರಸ್ತೆ ಬದಿಯಲ್ಲಿ ಪೈಪ್‌ಲೈನ್ ಅಳವಡಿಸುವುದರಿಂದ ಕಾಮಗಾರಿ ನಡೆಯುವ ಬಡಾವಣೆಗಳಲ್ಲಿ ರಸ್ತೆಯನ್ನು ಅಗೆಯಲಾಗುತ್ತಿದೆ. ಈ ರಸ್ತೆಗಳಲ್ಲಿ ಈಗಾಗಲೇ ಕುಡಿಯುವ ನೀರು, ಒಳ ಚರಂಡಿ, ಹಲವು ಕೇಬಲ್‌ಗಳು ನೆಲದಲ್ಲಿ ಹಾದು ಹೋಗಿರುವುದರಿಂದ ಎಚ್ಚರಿಕೆಯಿಂದ ಕಾಮಗಾರಿ ನಿರ್ವಹಿಸಬೇಕಾಗುತ್ತದೆ. ಹಳ್ಳ ತೋಡಿದ ನಂತರ ರಸ್ತೆಯನ್ನು ಮೊದಲಿನಂತೆ ನಿರ್ಮಾಣ ಮಾಡಿಕೊಡಬೇಕು. ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆ ಆಗದಂತೆ ಬಹಳ ಶಿಸ್ತಿನಿಂದ ಕಾಮಗಾರಿ ನಡೆಸಬೇಕು ಎಂದು ನಗರದ ನಿವಾಸಿಗಳು ಒತ್ತಾಯಿಸಿದ್ದಾರೆ.
ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಸಂಪರ್ಕವನ್ನು ಮನೆಗಳಿಗೆ ನೇರವಾಗಿ ನೀಡುವುದರಿಂದ ಗೃಹಬಳಕೆ ಅಡುಗೆ ಅನಿಲ ಅಗ್ಗದ ದರದಲ್ಲಿ ದೊರೆಯಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಖರೀದಿ ಮಾಡುತ್ತಿರುವ ಗೃಹಬಳಕೆ ಸಿಲಿಂಡರ್‌ಗೆ 1100-1150 ರೂ. ನೀಡಬೇಕಿದೆ. ಪೈಪ್‌ಲೈನ್ ಮೂಲಕವಾದರೆ 600-700 ರೂ.ಗಳಿಗೆ ಅಷ್ಟೇ ಪ್ರಮಾಣದ ಅಡುಗೆ ಅನಿಲ ಲಭ್ಯವಾಗಲಿದೆ. ನಿರಂತರ ಪೂರೈಕೆ ಇರುವುದರಿಂದ ಪ್ರತಿ ಮನೆಗೆ ಮೀಟರ್ ಅಳವಡಿಸಲಾಗುತ್ತದೆ. ಎಷ್ಟು ಬಳಕೆ ಮಾಡುತ್ತಾರೋ ಅಷ್ಟಕ್ಕೆ ಮಾತ್ರ ಹಣ ಪಾವತಿಸಬಹುದಾಗಿದೆ. ಗ್ಯಾಸ್ ಸಿಲಿಂಡರ್ ಬೆಂಕಿ ಅನಾಹುತದಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಪೈಪ್‌ಲೈನ್ ಮೂಲಕ ನೀಡುವ ಗ್ಯಾಸ್ ಸ್ಫೋಟಗೊಳ್ಳುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಕಂಪನಿಯ ನೌಕರರು ಮಾಹಿತಿ ನೀಡಿದರು.
ನಗರದ ಅಭಿವೃದ್ಧಿಗೆ ಗ್ಯಾಸ್ ಪೈಪ್‌ಲೈನ್ ಯೋಜನೆ ಪೂರಕವಾಗಿದ್ದು, ನಗರಸಭೆಗೂ ಆದಾಯ ತಂದುಕೊಡುತ್ತದೆ. ಮನೆ-ಮನೆಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವುದರಿಂದ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ.-ರಾಮದಾಸ್, ಪೌರಾಯುಕ್ತ, ನಗರಸಭೆ, ಚಾಮರಾಜನಗರ ಪೈಪ್‌ಲೈನ್ ಮೂಲಕ ಮನೆ-ಮನೆಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಯೋಜನೆ ಅತ್ಯಂತ ಅನುಕೂಲಕರವಾಗಿದೆ. ಕಾಮಗಾರಿಯನ್ನು ಅತ್ಯಂತ ಶಿಸ್ತಿನಿಂದ, ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.-ಸುರೇಶ್ ಎನ್.ಋಗ್ವೇದಿ, ನಿವಾಸಿ, ಚಾಮರಾಜನಗರ