ಚಾಮರಾಜನಗರದಲ್ಲಿ ಉದ್ಯೋಗ ಮೇಳ ಆಯೋಜನೆ

20raju16
Published on

ಚಾಮರಾಜನಗರ: ಉದ್ಯೋಗ ನೇಮಕಾತಿಗಾಗಿ ಜಿಲ್ಲಾ ಉದ್ಯೋಗ ಇಲಾಖೆ ಮತ್ತು ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದ ಎಲ್ಕಿಚ್ ಸಹಯೋಗದಲ್ಲಿ ಗುರುವಾರ ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ನೇರ ಸಂದರ್ಶನದಲ್ಲಿ ಭಾಗವಹಿಸಿದ್ದ ನಿರುದ್ಯೋಗಿಗಳು ಜಿಲ್ಲೆಯಲ್ಲಿರುವ ನಿರುದ್ಯೋಗದ ಪ್ರಮಾಣವನ್ನು ತೋರಿಸಿದರು.

ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಡಿಪ್ಲೊಮಾ, ಐಟಿಐ, ಮೆಕಾನಿಕಲ್, ಬಿಇ ಹಾಗೂ ಇತರ ವ್ಯಾಸಂಗ ಮಾಡಿರುವ 1000 ಕ್ಕಿಂತಲೂ ಅಧಿಕ ನಿರುದ್ಯೋಗಿ ಯುವಕರು ಸಂದರ್ಶನಕ್ಕೆ ಬಂದಿದ್ದರು. ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜತೆಗೆ, ಹಲವು ಖಾಸಗಿ ಕಂಪನಿಗಳನ್ನು ಕರೆತರುತ್ತಿದೆಯಾದರೂ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂಬ ಅಭಿಪ್ರಾಯ ಉದ್ಯೋಗ ಆಕಾಂಕ್ಷಿಗಳಿಂದಲೇ ಕೇಳಿಬಂದಿತು.

2000 ಉದ್ಯೋಗ ಸೃಷ್ಟಿ
ಎಲ್ಕಿಚ್ ಕಂಪನಿ ಕರೆದಿದ್ದ ನೇರ ಸಂದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉದ್ಯೋಗಾಧಿಕಾರಿ ಮಹಮ್ಮದ್ ಅಕ್ಬರ್, ಮುಂದಿನ 1 ವರ್ಷದಲ್ಲಿ 2000 ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದರು.
ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ಉದ್ಯೋಗ ವಿನಿಮಯ ಕಚೇರಿ, ಹಲವು ಖಾಸಗಿ ಕಂಪನಿಗಳು ಹಾಗೂ ನಿರುದ್ಯೋಗಿ ಯುವಕರ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿವೆ. ಯುವಕ-ಯುವತಿಯರ ವಿದ್ಯಾರ್ಹತೆ ಹಾಗೂ ಕೌಶಲ ಆಧಾರದ ಮೇಲೆ ಹಲವು ಉದ್ಯೋಗಗಳನ್ನು ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೈಗಾರಿಕೆ ಹಾಗೂ ಕಂಪನಿಗಳು ಜಿಲ್ಲೆಗೆ ಬರಲಿದ್ದು ಸ್ಥಳೀಯ ನಿರುದ್ಯೋಗಿ ಯುವಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.

215 ಯುವಕರ ಆಯ್ಕೆ
ನೇರ ಸಂದರ್ಶನದಲ್ಲಿ 215 ಯುವಕರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಕಂಪನಿಯ ಮಿಷಿನ್ ಆಪರೇಟರ್, ಟೀಮ್ ಲೀಟರ್, ಪ್ರೋಗ್ರಾಮ್ ಸೂಪರ್‌ವೈಸರ್, ಕ್ವಾಲಿಟಿ ಇಂಜಿನಿಯರ್, ಮೆಕಾನಿಕಲ್ ಟೆಕ್ನಿಷಿಯನ್ ಹಾಗೂ ಇತರ ಹುದ್ದೆಗಳಿಗಾಗಿ ವಿದ್ಯಾರ್ಹತೆ ಅನುಸಾರ ಸುಮಾರು 546 ಯುವಕರು ಸಂದರ್ಶನದಲ್ಲಿ ಭಾಗವಹಿಸಿದ್ದರು. ಇದರಲ್ಲಿ 215 ಯುವಕರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಯಿತು. ಉಳಿದ ಯುವಕರು ನಿರಾಶೆಯಿಂದ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net