ರಸ್ತೆ ಮುಳುಗಡೆಯಾಗುವುದನ್ನು ತಪ್ಪಿಸಲು ಮರಳಿ ಯತ್ನ ಆರಂಭ

20raju10
Published on

ಚಾಮರಾಜನಗರ : ಮಳೆ ಬಂದರೆ ಚರಂಡಿ ನೀರು ಉಕ್ಕಿ ಹರಿದು ರಸ್ತೆ ಮುಳುಗಡೆಯಾಗುವುದನ್ನು ತಪ್ಪಿಸಲು ನಗರಸಭೆ ಮರಳಿ ಯತ್ನ ಆರಂಭಿಸಿದೆ.

ನಗರದ ಜಿಲ್ಲಾಡಳಿತ ಭವನ ಮುಂಭಾಗದ ಬಿ.ರಾಚಯ್ಯ ಜೋಡಿ ರಸ್ತೆಗೆ ಹೊಂದಿಕೊಂಡಿರುವ ದೊಡ್ಡ ಮೋರಿಯಲ್ಲಿ ಅಡ್ಡಲಾಗಿ ಕಾವೇರಿ ನೀರಿನ ಪೈಪ್‌ಲೈನ್ ಹಾದುಹೋಗಿದ್ದು, ಮಳೆ ಬಂದರೆ ಸರಾಗವಾಗಿ ನೀರು ಹರಿದು ಹೋಗುತ್ತಿಲ್ಲ. ಹೀಗಾಗಿ ರಸ್ತೆಗೆ ನೀರು ಹರಿದು ಅವಾಂತರ ಸೃಷ್ಟಿಯಾಗುತ್ತಿದೆ.

ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಹಿಂದೆ ಜಿಲ್ಲಾಡಳಿತ ಭವನದ ಮುಂಭಾಗ ಚರಂಡಿ ತೆರೆದು ಕಬ್ಬಿಣದ ಮೆಸ್ ಹಾಕಲಾಗಿತ್ತು. ಜತೆಗೆ ಬಿ.ರಾಚಯ್ಯ ಜೋಡಿ ರಸ್ತೆಯ ಡಿವೈಡರ್‌ಗಳ ಮಧ್ಯೆ ತೂತು ಕೊರೆದು ನೀರು ಹೋಗುವಂತೆ ಮಾಡಲಾಗಿತ್ತು. ಆದರೂ ಸಮಸ್ಯೆಗೆ ಬಗೆಹರಿದಿರಲಿಲ್ಲ.

ಇದೀಗ ಚರಂಡಿ ಮಧ್ಯೆ ಹಾದುಹೋಗಿರುವ ಕಾವೇರಿ ಪೈಪ್‌ಲೈನ್ ತೆರವುಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, 2 ದಿನಗಳಿಂದ ಕಾಂಕ್ರೀಟ್ ರಸ್ತೆಯನ್ನು ಅಗೆಯಲಾಗುತ್ತಿದೆ. ಈ ಕಾಮಗಾರಿಗೆ ಸುಮಾರು 10 ಲಕ್ಷ ರೂ. ವೆಚ್ಚವಾಗಲಿದೆ. ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಅಡ್ಡಲಾಗಿದ್ದ ದೊಡ್ಡ ಚರಂಡಿಯ ಸೇತುವೆ ಕೆಳಗೆ ಕಾವೇರಿ ಪೈಪ್ ಹಾದು ಹೋಗಿದ್ದರಿಂದ ಚರಂಡಿಯಲ್ಲಿ ಬರುವ ಕಸ, ಪ್ಲಾಸ್ಟಿಕ್ ಶೇಖರಣೆಯಾಗಿ ನೀರು ಸರಾಗವಾಗಿ ಹರಿದುಹೋಗಲು ಸಮಸ್ಯೆಯಾಗುತ್ತಿತ್ತು. ಮಳೆ ಬಂದಾಗ ಜೋಡಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು.

ಈ ನಡುವೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾವೇರಿ ಪೈಪ್‌ಲೈನ್ ತೆರವುಗೊಳಿಸುವಂತೆ ಕ್ರಮವಹಿಸಿದ್ದರು. ಅಲ್ಲದೆ ಈ ಸಂಬಂಧ ಸ್ಥಳದಲ್ಲಿದ್ದ ನಗರಸಭಾ ಪೌರಾಯುಕ್ತ ರಾಮದಾಸ್ ಅವರಿಗೆ ಅಗತ್ಯ ಸೂಚನೆ ನೀಡಿದ್ದರು.
ಈಗ ಕಾಮಗಾರಿ ಪ್ರಾರಂಭಗೊಂಡಿದ್ದು, ಚರಂಡಿಗೆ ಅಡ್ಡಲಾಗಿರುವ ಪೈಪ್ ತೆರವುಗೊಳಿಸಿ ರಸ್ತೆಯ ಮೇಲ್ಭಾಗದಿಂದ ಪೈಪ್ ಹಾದು ಹೋಗುವಂತೆ ಮಾಡಲಾಗುತ್ತಿದೆ. ಇದರಿಂದ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗಲಿದೆ. ಶೀಘ್ರ ಕಾಮಗಾರಿಯನ್ನು ಮುಕ್ತಾಯಗೊಳಿಸಲಾಗುವುದು ಎಂದು ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಮಂಜು ವಿಜಯವಾಣಿಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net