

ಚಾಮರಾಜನಗರ:ಕಳೆದ ಬಾರಿಯ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಆಗಿರುವ ಸಮಸ್ಯೆಗಳನ್ನು ಗುರುತಿಸಿ, ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಈ ಸಾಲಿನಲ್ಲಿ ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ಪಣತೊಡಬೇಕಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆ ನೀಡಿದರು.
ನಗರದ ಹಳೆ ಕೆಡಿಪಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಸುಧಾರಣಾ ಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಮಾರ್ಗದರ್ಶನ ಕುರಿತು ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಹಾಗೂ ಶಿಕ್ಷಕರ ಕೊರತೆ ಇದ್ದರೇ ಮಾಹಿತಿ ನೀಡಬೇಕು. ಶಿಕ್ಷಕರಿಗೆ ಯಾವುದೇ ಸಮಸ್ಯೆಯಾದರೆ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಈ ಬಾರಿ ಅತ್ಯುತ್ತಮ ಫಲಿತಾಂಶ ಬರುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕೇಂದ್ರವೂ ಆಗಿರುವ ಚಾಮರಾಜನಗರ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕಳೆದ ಬಾರಿ ಕಳಪೆ ಮಟ್ಟದ ಸಾಧನೆ ತೋರಿದೆ. ಇದು ಅತ್ಯಂತ ಶೋಚನೀಯ ಸಂಗತಿಯಾಗಿದೆ. ಕೆಪಿಎಸ್ ಶಾಲೆಗಳು ಫಲಿತಾಂಶದಲ್ಲಿ ಹಿಂದುಳಿದಿವೆ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳನ್ನು ಹುರಿದುಂಬಿಸುವ ಕೆಲಸ ಮಾಡಬೇಕು. ಶಾಲವಾರು ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ ಸೂಕ್ತ ತರಬೇತಿ ನೀಡಬೇಕು. ಎಲ್ಲಾ ಅವಕಾಶಗಳು ಇದ್ದಾಗ ಫಲಿತಾಂಶ ತರುವುದೇ ಬೇರೆ, ಆದರೇ ಅವಕಾಶಗಳು ಇಲ್ಲದಾಗ ಹೆಚ್ಚಿನ ಫಲಿತಾಂಶ ತರುವುದು ಮುಖ್ಯವಾಗುತ್ತದೆ ಎಂದರು.
ಮುಂದಿನ ತಲೆಮಾರಿನ ಮಕ್ಕಳನ್ನು ಗಮನದಲ್ಲಿ ಇಟ್ಟುಕೊಂಡು ಪಾಲಕರು ಮಾಡುವ ಕೆಲಸವನ್ನು ಶಿಕ್ಷಕರು ಮಾಡಬೇಕಾಗಿದೆ. ನಾವು ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತೇವೆ. ನಮ್ಮ ಜಿಲ್ಲೆಯ ಮಕ್ಕಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಯಾಗಬೇಕಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್, ಡಯಟ್ ಪ್ರಾಂಶುಪಾಲ ಕಾಶೀನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ, ನೋಡಲ್ ಅಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರು ಹಾಜರಿದ್ದರು.
ನಮ್ಮ ಚಿತ್ತ, ಸಂಪೂರ್ಣ ತೇರ್ಗಡೆಯತ್ತಾ:
ಈ ಬಾರಿಯ ಎಸ್.ಎಸ್.ಎಲ್.ಸಿ ಯಲ್ಲಿ ಶೇ.100 ರಷ್ಟು ಫಲಿತಾಂಶವನ್ನು ಪಡೆಯುವ ನಿಟ್ಟಿನಲ್ಲಿ ನಮ್ಮ ಚಿತ್ತ, ಸಂಪೂರ್ಣ ತೇರ್ಗಡೆಯತ್ತಾ ಎಂಬ ಧ್ಯೇಯದೊಂದಿಗೆ ಸೂಕ್ತ ರೀತಿಯ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಕೊಳ್ಳೇಗಾಲ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಅವರು ತಿಳಿಸಿದರು. ಈ ಬಾರಿ ಶೇ.90 ಕ್ಕಿಂತಲೂ ಹೆಚ್ಚಿನ ಫಲಿತಾಂಶ ಪಡೆಯಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು. ಯಳಂದೂರು, ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಹನೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹ ತಮ್ಮ ಕಾರ್ಯ ಯೋಜನೆಯ ಕುರಿತು ಮಾಹಿತಿ ನೀಡಿದರು.
ಕಳೆದ ವರ್ಷದ ಫಲಿತಾಂಶ ಈ ಸಾಲಿನಲ್ಲಿ ಮರುಕಳಿಸಬಾರದು. ಮುಂದಿನ ದಿನಗಳಲ್ಲಿ ಪ್ರತಿಯೊಂದು ಶಾಲೆಗಳಿಗೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಓ ಭೇಟಿ ನೀಡಲಿದ್ದಾರೆ. ಶೇ.೯೦ ಕ್ಕಿಂತಲೂ ಹೆಚ್ಚಿನ ಫಲಿತಾಂಶ ಪಡೆಯಲು ಶಿಕ್ಷಕರು ಶ್ರಮಿಸಬೇಕು.|ರಾಮಚಂದ್ರ ರಾಜೇ ಅರಸ್, ಉಪನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ, ಚಾಮರಾಜನಗರ.