

ಚಾಮರಾಜನಗರ: ನಗರಸಭೆ ವತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶೇಷವಾಗಿ ನಿರ್ಮಾಣ ಮಾಡಲಾಗಿರುವ ಅತ್ಯಾಧುನಿಕ ಆಕಾಂಕ್ಷೆಯ ಶೌಚಾಲಯ ಉದ್ಘಾಟನೆ ಭಾಗ್ಯ ಕಂಡಿಲ್ಲ.
ನಗರದ ಡಿವಿಯೇಷನ್ ರಸ್ತೆಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಬಳಿ ನಗರಸಭೆ ವಿಶೇಷ ಘಟಕ ಯೋಜನೆಯಡಿ ಅಂದಾಜು 31.40 ಅಂದಾಜು ವೆಚ್ಚದಲ್ಲಿ ವಿಶೇಷವಾದ ಆಕಾಂಕ್ಷೆಯ ಶೌಚಾಲಯವನ್ನು ಅತ್ಯಾಧುನಿಕವಾಗಿ ನಿರ್ಮಾಣಮಾಡಲಾಗಿದೆ. ಅತ್ಯಾಕರ್ಷಕ ಶೌಚಗೃಹ, ಸ್ನಾನಗೃಹ, ಹಾಲುಣಿಸುವ ಕೊಠಡಿ, ಪುರುಷ ಮತ್ತು ಮಹಿಳಾ ವಿಕಲಚೇತನರಿಗೆ ಪ್ರತ್ಯೇಕವಾಗಿ ವಿಶೇಷವಾದ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಅದಲ್ಲದೇ ಟ್ರಾನ್ಸ್ ಜೆಂಡರ್‌ಗಳಿಗೂ ಕೂಡ ವಿಶೇಷವಾದ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಶೌಚಾಲಯ ಕಾಮಗಾರಿ ಮುಕ್ತಾಯಗೊಂಡು ಸುಮಾರು 4-5 ತಿಂಗಳು ಕಳೆದಿದ್ದು, ಇಂದಿಗೂ ಉದ್ಘಾಟನೆ ಭಾಗ್ಯ ಕಾಣದೇ ಬಾಗಿಲು ಮುಚ್ಚಿದೆ.
ಈ ನೂತನ ಶೌಚಾಲಯದ ಸಮೀಪದಲ್ಲೇ ಇರುವ ಹಳೆಯ ಶೌಚಾಲಯದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದು, ಅಶುಚಿತ್ವ ತಾಂಡವವಾಡುತ್ತಿದೆ. ಪರಿಣಾಮವಾಗಿ ಸಾರ್ವಜನಿಕರು ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವಂತಾಗಿದೆ. ಸಮೀಪದಲ್ಲೇ ಜಿಲ್ಲಾ ಕೇಂದ್ರ ಗ್ರಂಥಾಲಯದ ಹೊಸ ಕಟ್ಟಡವೂ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆದಷ್ಟು ಬೇಗ ಶೌಚಾಲಯವನ್ನು ಉದ್ಘಾಟನೆ ಮಾಡಿ ಸಾರ್ವಜನಿಕರ ಅನುಕೂಲಕ್ಕೆ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಅತ್ಯಾಕರ್ಷಕ ಆಕಾಂಕ್ಷೆಯ ಶೌಚಾಲಯ:
ಆಕಾಂಕ್ಷೆಯ ಶೌಚಾಲಯದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ 10 ಶೌಚಾಲಯವನ್ನು ಅತ್ಯಾಧುನಿಕವಾಗಿ ನಿರ್ಮಿಸಲಾಗಿದೆ. ಅಲ್ಲೇ ಅತ್ಯಾಧುನಿಕ ಶೈಲಿಯ 5 ಮೂತ್ರಾಲಯ ಹಾಗೂ 2 ಹ್ಯಾಂಡ್‌ವಾಷ್‌ಗಳನ್ನು ಅಳವಡಿಸಲಾಗಿದೆ. ಮಹಿಳೆಯರಿಗೆ 1 ಹಾಲುಣಿಸುವ ಕೊಠಡಿ, ಪುರುಷ ಮತ್ತು ಮಹಿಳಾ ಅಂಗವಿಕಲರಿಗೆ ಅನುಕೂಲವಾಗುವಂತೆ 2 ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ತಲಾ 2 ಸ್ನಾನದ ಕೊಠಡಿ ಇದೆ. ಅದಲ್ಲದೇ ವಿಶೇಷವಾಗಿ ಟ್ರಾನ್ಸ್ ಜೆಂಡರ್‌ಗಳಿಗೂ 1 ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. 1000 ಲೀಟರ್ ನೀರು ಸಂಗ್ರಹದ ಎರಡು ಟ್ಯಾಂಕ್‌ಗಳನ್ನು ಅಳವಡಿಸಿದ್ದು, ದಿನದ 24 ಗಂಟೆಯಲ್ಲೂ ನಿರಂತರವಾಗಿ ನೀರು ದೊರೆಯುವ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯದ ಗೋಡೆಗಳನ್ನು ವಿವಿಧ ಜಾನಪದ ಕಲೆಗಳ ಚಿತ್ತಾರಗಳಿಂದ ಸಿಂಗರಿಸಲಾಗಿದ್ದು, ಸುತ್ತಲೂ ಹುಲ್ಲಿನ ಹಾಸು ಹಾಕಬೇಕಿದೆ. ಶೌಚಾಲಯದ ಕಾಮಗಾರಿ ಮುಕ್ತಾಯಗೊಂಡಿದ್ದರು, ನಗರಸಭಾ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದಿಗೂ ಶೌಚಾಲಯ ಸಾರ್ವಜನಿಕರು ಹಾಗೂ ಪ್ರವಾಸಿಗರ ಬಳಕೆಗೆ ಮುಕ್ತವಾಗಿಲ್ಲ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರವಾಸಿಗರಿಗೆ ಅನುಕೂಲ:
ನಗರದ ಡಿವಿಯೇಷನ್ ರಸ್ತೆಯಲ್ಲಿ ತಮಿಳುನಾಡು, ಕೇರಳ ಹಾಗೂ ಇನ್ನಿತರೆ ಕಡೆಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಮಾಡುತ್ತಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಶೌಚಾಲಯವನ್ನು ನಿರ್ಮಾಣಮಾಡಲಾಗಿದೆ. ಹಲವಾರು ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳಿದ್ದರೂ ಕೂಡ ಅವುಗಳಲ್ಲಿ ಪ್ರತ್ಯೇಕವಾದ ಸ್ನಾನದ ಕೊಠಡಿಗಳು ಇರುವುದಿಲ್ಲ. ಆದರೇ ಈ ಶೌಚಾಲಯದಲ್ಲಿ ಸ್ನಾನಮಾಡಿ ಶುಚಿಯಾಗಲು ಅವಕಾಶವಿದೆ. ಈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚಾರ ಮಾಡುವುದರಿಂದ ಅವರಿಗೂ ಅನುಕೂಲವಾಗುತ್ತದೆ. ಈ ದೃಷ್ಟಿಯಲ್ಲಿ ನಗರಸಭಾ ಅಧಿಕಾರಿಗಳು ಇತ್ತ ಗಮನಹರಿಸಿ, ಆದಷ್ಟು ಬೇಗ ಆಕಾಂಕ್ಷೆಯ ಶೌಚಾಲಯವನ್ನು ಉದ್ಘಾಟನೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಈಗಾಗಲೇ ಶೌಚಾಲಯದ ಕಾಮಗಾರಿ ಮುಕ್ತಾಯವಾಗಿದೆ. ಕೆಲವು ಸಣ್ಣಪುಟ್ಟ ಕೆಲಸಗಳು ಆಗಬೇಕಿದೆ. ಹಣಕೊಟ್ಟು ಉಪಯೋಗಿಸುವ ಶೌಚಾಲಯವಾಗುಇರುವುದರಿಂದ ಟೆಂಡರ್ ಕರೆದ ನಂತರ ಪ್ರಾರಂಭಮಾಡಲಾಗುತ್ತದೆ. ಶೀಘ್ರದಲ್ಲೇ ಉದ್ಘಾಟನೆ ಮಾಡಲು ಕ್ರಮವಹಿಸಲಾಗುವುದು.-ಎಸ್.ವಿ.ರಾಮದಾಸ್, ಪೌರಾಯುಕ್ತ, ನಗರಸಭೆ, ಚಾಮರಾಜನಗರ ಡಿವಿಯೇಷನ್ ರಸ್ತೆಯಲ್ಲಿ ಸೂಕ್ತವಾದ ಸಾರ್ವಜನಿಕ ಶೌಚಾಲಯಗಳು ಇಲ್ಲ. ಸಾರ್ವಜನಿಕರು ಹೆಚ್ಚಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಾಲಯವನ್ನೇ ಅವಲಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಶೌಚಾಲಯವನ್ನು ಆದಷ್ಟು ಬೇಗ ಉದ್ಘಾಟಿಸಬೇಕು.-ಮಂಜುನಾಥ್, ನಿವಾಸಿ, ಚಾಮರಾಜನಗರ