ಬದುಕಿನ ಆದರ್ಶಗಳನ್ನು ಕಲಿಸುವ ರಾಮಾಯಣ

17rajesh1
Published on

ಚಾಮರಾಜನಗರ: ಪ್ರತಿಯೊಬ್ಬರ ಬದುಕಿಗೂ ಆದರ್ಶವಾಗುವ ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಶ್ರೀ ವಾಲ್ಮೀಕಿ ಜಗತ್ತಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ ಹೇಳಿದರು.

ನಗರದ ಸತ್ತಿ ರಸ್ತೆಯಲ್ಲಿರುವ ಸಾರಿಗೆ ಡಿಪೋದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಗೂ ಆದರ್ಶವಾಗುವ ಮಹಾನ್ ಗ್ರಂಥವಾದ ರಾಮಾಯಣವನ್ನು ವಾಲ್ಮೀಕಿ ರಚಿಸಿದರು. ಸಂವಿಧಾನದ ಆಶಯಗಳನ್ನು ಅಂದಿನ ರಾಮಾಯಣ ಗ್ರಂಥದಲ್ಲೂ ಕಾಣಬಹುದಾಗಿದೆ. ಅಂತಹ ರಾಮಾಯಣದ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು ಮಾತನಾಡಿ, ಭಾರತೀಯರು ಅತ್ಯಂತ ಗೌರವಿಸುವ ಮಹಾಕಾವ್ಯ ರಾಮಾಯಣವನ್ನು ಬರೆದ ಕವಿ ವಾಲ್ಮೀಕಿಯ ಜಯಂತಿಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. 24,000 ಸಂಸ್ಕೃತ ಶ್ಲೋಕಗಳಿರುವ ಒಂದು ಬೃಹತ್ ಗ್ರಂಥವನ್ನು ಯಾವುದೇ ಹಿಂದಿನ ಮಾದರಿಯ ಆಸರೆಯಿಲ್ಲದೆ ತಾನೇ ಸೃಷ್ಟಿಸಿದ ಕಾವ್ಯ ಪ್ರಕಾರದಲ್ಲಿ ಬರೆದ ವಾಲ್ಮೀಕಿಯ ವಿದ್ವತ್ತಿಗೆ ಖಂಡಿತವಾಗಿ ನಮಿಸಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಬಂಗಾರನಾಯಕ, ಘಟಕ ವ್ಯವಸ್ಥಾಪಕ ಕುಮಾರ್ ನಾಯಕ್, ಸಾರಿಗೆ ನೌಕರರ ಸಂಘದ ಅಧ್ಯಕ್ಷ ಕೆಲ್ಲಂಬಳ್ಳಿ ನಾಗರಾಜು, ಮಹದೇವು, ಹೊಂಗನೂರು ಸಿದ್ದಲಿಂಗಸ್ವಾಮಿ, ಜಗದೀಶ್, ಕಿರಣ್, ಎಂ.ಸಿ.ಸಿದ್ದರಾಜು, ನಟರಾಜು, ಜಗದೀಶ್, ಕುಮಾರಸ್ವಾಮಿ, ಸೋಮಣ್ಣ, ರಂಗಸ್ವಾಮಿ, ಅರಸ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net