

ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಸರಣಿ ಕಳ್ಳತನ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಪೊಲೀಸರ ಮನೆಯಲ್ಲೇ ಕಳ್ಳತನವಾಗಿರುವುದು ಸಾರ್ವಜನಿಕರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ನಗರದ ಚೆನ್ನಿಪುರಮೋಳೆ ಬಡಾವಣೆಯ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಸಮೀಪದಲ್ಲಿರುವ ನಿವಾಸಿ ಹಾಗೂ ಪಟ್ಟಣ ಪೊಲೀಸ್ ಠಾಣೆಯ ಪೇದೆ ಮನು ಅವರ ಮನೆಯಲ್ಲಿ ಮಂಗಳವಾರ ರಾತ್ರಿ ಖದೀಮರು ಕನ್ನ ಹಾಕಿದ್ದಾರೆ. ಪೊಲೀಸ್ ಮನು ಮತ್ತು ಕುಟುಂಬದವರು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ಸಮಯವನ್ನು ನೋಡಿಕೊಂಡು ಖದೀಮರು ಕಳ್ಳತನ ಮಾಡಿದ್ದಾರೆ. ಬುಧವಾರ ಬೆಳಗ್ಗೆ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ತಿಳಿದು ಬಂದಿದೆ. ಕಳ್ಳರು ಸುಮಾರು 4 ಲಕ್ಷ ರೂ. ಗಿಂತಲೂ ಅಧಿಕ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಹಾಗೂ 40 ಸಾವಿರ ರೂ. ದೋಚಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮತ್ತು ಪಟ್ಟಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರಾಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮನು ಅವರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ವಿಜಯವಾಣಿಗೆ ಮಾಹಿತಿ ನೀಡಿದರು.