ಬಿಗಿಪಟ್ಟಾದ ಪ್ರತಿಮೆ ಪ್ರತಿಷ್ಠಾಪನೆ

16rajesh1
Published on

ಚಾಮರಾಜನಗರ: ಜಿಲ್ಲಾ ಕೇಂದ್ರ ಚಾಮರಾಜನಗರದ ಆಡಳಿತ ಸೌಧ ಜಿಲ್ಲಾಡಳಿತ ಭವನದ ಆವರಣದಲ್ಲಿ ಮಹನೀಯರ ಪುತ್ಥಳಿ ಪ್ರತಿಷ್ಠಾಪನೆ ವಿಚಾರ ಬಿಗಿಪಟ್ಟಾಗಿ ಪರಿಣಮಿಸಿದೆ.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಲೋಕಾರ್ಪಣೆಗೆ ಸಜ್ಜಾಗಿರುವ ಸಾಂಸ್ಕೃತಿಕ ನಾಯಕ ಬಸವೇಶ್ವರರ ಪ್ರತಿಮೆ ಪ್ರತಿಷ್ಠಾಪನೆ ವಿಚಾರ ಚರ್ಚೆ ಹುಟ್ಟುಹಾಕಿತ್ತು. ಬಸವೇಶ್ವರರ ಪುತ್ಥಳಿ ನಿರ್ಮಾಣ ಮಾಡಬೇಕೆಂಬುದು ಹಲವು ವರ್ಷಗಳ ಒತ್ತಾಯವಾಗಿತ್ತು. ಇದಕ್ಕೆ ಕಾಲ ಕೂಡಿ ಬಂದಾಗ ಜಿಲ್ಲಾಡಳಿತ ಭವನದಲ್ಲಿ ಯಾವ ಜಾಗದಲ್ಲಿ ಪ್ರತಿಮೆ ನಿರ್ಮಾಣ ಮಾಡಬೇಕೆಂಬ ಗೊಂದಲ ಏರ್ಪಟ್ಟಿತ್ತು. ಅಂತಿಮವಾಗಿ ಜಿಲ್ಲಾಡಳಿತ ಭವನದ ಮುಂಭಾಗ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಉದ್ಘಾಟನೆಗೆ ಬಾಕಿ ಇದೆ. ಈ ಮಧ್ಯೆ ಪ್ರತಿಮೆ ವಿಚಾರದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ್ದ ಬೆಳವಣಿಗೆಗಳು ಚರ್ಚೆಗೆ ಕಾರಣವಾಗಿತ್ತು.

ಇದರ ಬೆನ್ನಲ್ಲೇ ಮಹರ್ಷಿ ವಾಲ್ಮೀಕಿ ಪ್ರತಿಮೆ ನಿರ್ಮಾಣದ ವಿಚಾರ ಮುನ್ನೆಲೆಗೆ ಬಂದಿದೆ. ಹೋರಾಟ ಗಂಭೀರ ಸ್ವರೂಪ ಪಡೆದುಕೊಂಡಿದೆ. ನಾಯಕ ಸಮುದಾಯದ ಮುಖಂಡರು ಪಕ್ಷಾತೀಯವಾಗಿ ಇದಕ್ಕೆ ಕೈ ಜೋಡಿಸಿದ್ದಾರೆ. ಜಿಲ್ಲಾಡಳಿತ ಭವನದ ಆವರಣದಲ್ಲಿ ವಾಲ್ಮೀಕಿ ಪುತ್ಥಳಿ ನಿರ್ಮಾಣ ಮಾಡಬೇಕೆಂಬುದು ಹಲವು ವರ್ಷಗಳಿಂದ ನಾಯಕ ಸಮುದಾಯ ಒತ್ತಾಯ ಮಾಡಿಕೊಂಡು ಬರುತ್ತಿದೆ. ಆದರೂ ಪ್ರಯೋಜನವಾಗದೆ ಇರುವುದಕ್ಕೆ ಬೇಸರಗೊಂಡಿರುವ ಸಮುದಾಯದವರು ಅ.17ರಂದು ಆಯೋಜಿಸಿರುವ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕಾರ ಹಾಕಿದ್ದಾರೆ. ಮೆರವಣಿಗೆ ನಡೆಸಿ ಬಳಿಕ ಜಿಲ್ಲಾಡಳಿತ ಭವನದ ಆವರಣದಲ್ಲಿ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಪುತ್ಥಳಿ ನಿರ್ಮಾಣ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಗಮಿಸಿ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಿದ್ದಾರೆ. ಸಮುದಾಯದವರು ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ. ಆದರೆ ಸಮುದಾಯದ ಮುಖಂಡರು ತಾವೇ ಆಯೋಜಿಸಿರುವ ಸಮಾರಂಭದಲ್ಲಿ ಭಾಗವಹಿಸಿ, ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆಗೆ ಭೂಮಿಪೂಜೆ ಮಾಡಲು ಮುಂದಾಗಲಿದ್ದಾರೆ. ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾಡಳಿತದಿಂದ ಅನುಮತಿ ಸಿಕ್ಕಿಲ್ಲ. ಆದರೂ ಸಮಾಜದ ಮುಖಂಡರು ಭೂಮಿಪೂಜೆ ಮಾಡಲು ಮುಂದಾಗುತ್ತಿರುವುದರಿಂದ ಗುರುವಾರ ಏನಾಗಬಹುದು ಎನ್ನುವು ಕುತೂಹಲ ಮೂಡಿದೆ.

ಹನೂರಿನಲ್ಲಿ ಸ್ಥಳ ಗುರುತು:
ಹನೂರಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಮರು ಪ್ರತಿಷ್ಠಾಪನೆಗೆ ಜಾಗ ಗುರುತು ಮಾಡಲಾಗಿದೆ.
ಹನೂರು ಪಟ್ಟಣ ಪೊಲೀಸ್ ಠಾಣೆ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಇದ್ದ ಪ್ರತಿಮೆ ಮತ್ತೆ ರಸ್ತೆ ಮಧ್ಯದಲ್ಲೇ ಪ್ರತಿಷ್ಠಾಪನೆಗೊಳ್ಳಲಿದೆ. ಈ ಮಾರ್ಗದಲ್ಲಿ ರಸ್ತೆ ಅಭಿವೃದ್ಧಿ ಮಾಡುವುದರಿಂದ ಪ್ರತಿಮೆಯನ್ನು ವೃತ್ತದ ಮಧ್ಯೆ ಪ್ರತಿಷ್ಠಾಪನೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಇದಕ್ಕೆ ಮುಖಂಡರು ವಿರೋಧ ವ್ಯಕ್ತಪಡಿಸಿ ವೃತ್ತದ ಮಧ್ಯದಲ್ಲೇ ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕೆಂದು ಒತ್ತಾಯಿಸಿದ್ದರು. ಮುಖಂಡರ ಆಗ್ರಹದಂತೆ ಪ್ರತಿಮೆಯನ್ನು ರಸ್ತೆ ಮಧ್ಯದ ವೃತ್ತದಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಸದ್ಯ ಪ್ರತಿಮೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಪ್ರತಿಮೆ ಪ್ರತಿಷ್ಠಾಪನೆಗಾಗಿ ಜಾಗ ಗುರುತು ಮಾಡಲಾಗಿದ್ದು, ಶೀಘ್ರದಲ್ಲೇ ಪ್ರತಿಷ್ಠಾಪನೆಯಾಗಲಿದೆ.

ರಸ್ತೆಗೆ ಅಪ್ಪು ಹೆಸರಿಡಲು ಮನವಿ:
ಕೊಳ್ಳೇಗಾಲದ ಪ್ರಮುಖ ರಸ್ತೆಗೆ ಡಾ.ಪುನೀತ್‌ರಾಜ್‌ಕುಮಾರ್ ಅವರ ಹೆಸರಿಡಬೇಕೆಂದು ಡಾ.ಶಿವರಾಜ್‌ಕುಮಾರ್ ಮತ್ತು ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳು ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್‌ಗೆ ಮನವಿ ಸಲ್ಲಿಸಿದ್ದಾರೆ. ಕೊಳ್ಳೇಗಾಲದ ತಾಲೂಕು ಪಂಚಾಯಿತಿ ಕಚೇರಿ ವೃತ್ತದಿಂದ ದೇವಲ ಮಹರ್ಷಿ ವೃತ್ತದವರೆಗಿನ ರಸ್ತೆಗೆ ಪುನೀತ್ ಹೆಸರು ಇಡಬೇಕೆಂದು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ.

ವಾಲ್ಮೀಕಿ ಜಯಂತಿ ಪ್ರಯುಕ್ತ ಅ.17ರಂದು ನಗರದ ಪ್ರವಾಸಿ ಮಂದಿರದಿಂದ ಬೆಳಗ್ಗೆ 10.30ಕ್ಕೆ ಮೆರವಣಿಗೆ ಪ್ರಾರಂಭ ಮಾಡುತ್ತೇವೆ. ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಹಾಸ್ಟೆಲ್ ಬಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇವೆ. ಬಳಿಕ ಜಿಲ್ಲಾಡಳಿತ ಭವನಕ್ಕೆ ತೆರಳಿ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುತ್ತೇವೆ.ಪು.ಶ್ರೀನಿವಾಸ ನಾಯಕ, ವಿದ್ಯಾಭಿವೃದ್ಧಿ ಸಂಘದ ಉಪಾಧ್ಯಕ್ಷ, ಚಾಮರಾಜನಗರ

ಮಹರ್ಷಿ ವಾಲ್ಮೀಕಿ ಪ್ರತಿಮೆ ನಿರ್ಮಾಣದ ವಿಚಾರದಲ್ಲಿ ಸಮುದಾಯದ ಮುಖಂಡರು ದುಡುಕಿ ನಿರ್ಧಾರ ತೆಗೆದುಕೊಳ್ಳಬಾರದು. ಪುತ್ಥಳಿ ನಿರ್ಮಾಣಕ್ಕೆ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಅನುಮತಿ ದೊರೆತ ನಂತರ ನಿರ್ಮಾಣ ಮಾಡಲಾಗುವುದು.ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾಧಿಕಾರಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net