ಪಡಿತರ ಚೀಟಿದಾರರ ಖಾತೆಗೆ ನಗದು ಸಂದಾಯ

shilpa nag
Published on


ಚಾಮರಾಜನಗರ: ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ವಿತರಿಸುವ 5 ಕೆಜಿ ಆಹಾರಧಾನ್ಯದ ಬದಲಾಗಿ ಪ್ರತಿ ಕೆಜಿಗೆ 34 ರೂ.ನಂತೆ ಜಿಲ್ಲೆಯ 2,32,478 ಪಡಿತರ ಚೀಟಿದಾರರ ಮುಖ್ಯಸ್ಥರ ಖಾತೆಗೆ 11,71,93,750 ರೂ. ಸಂದಾಯವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ತಿಳಿಸಿದ್ದಾರೆ.

ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿಗಳ (ಪಿಎಚ್‌ಎಚ್) ಫಲಾನುಭವಿಗಳಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ ವಿತರಿಸಲಾಗುವ 5 ಕೆಜಿ ಆಹಾರಧಾನ್ಯದ ಬದಲಾಗಿ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣವನ್ನು ವರ್ಗಾಯಿಸಲಾಗಿದೆ.
ಉಳಿಕೆ 24,572 ಕಾರ್ಡ್‌ದಾರರ ಖಾತೆಗಳು ಸರಿಯಿಲ್ಲದ ಕಾರಣ ಹಣ ವರ್ಗಾವಣೆ ಸಾಧ್ಯವಾಲ್ಲ. ಚಾಮರಾಜನಗರ ತಾಲೂಕಿನಲ್ಲಿ 7707, ಗುಂಡ್ಲುಪೇಟೆ ತಾಲೂಕಿನಲ್ಲಿ 4716, ಹನೂರು ತಾಲೂಕಿನಲ್ಲಿ 5268, ಕೊಳ್ಳೇಗಾಲ ತಾಲೂಕಿನಲ್ಲಿ 5216, ಯಳಂದೂರು ತಾಲೂಕಿನಲ್ಲಿ 1665 ಪಡಿತರ ಚೀಟಿದಾರರು ಸೇರಿ ಒಟ್ಟು 24,572 ಪಡಿತರ ಚೀಟಿದಾರರ ಖಾತೆಗಳು ಸರಿಯಾಗಿಲ್ಲ. ಇಂತಹ ಪಡಿತರ ಚೀಟಿದಾರರ ವಿವರವನ್ನು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಯ ಮುಂದೆ ಪ್ರದರ್ಶಿಸಲಾಗಿದೆ.

ಉಳಿತಾಯ ಖಾತೆ ತೆರೆಯದ ಪಡಿತರ ಚೀಟಿದಾರರಿಗೆ ಅನುಕೂಲವಾಗಲು ಎಲ್ಲ ತಾಲೂಕು ಕಚೇರಿಗಳಲ್ಲಿ ಅಂಚೆ ಕಚೇರಿ ಮೂಲಕ ಐಪಿಪಿಬಿ (ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕಿಂಗ್) ಅಂಚೆ ಖಾತೆ ತೆರೆಯುವ ಕೇಂದ್ರ ತೆರೆಯಲಾಗಿದೆ. ಎಲ್ಲ ಅಂಚೆ ಕಚೇರಿಯಲ್ಲಿಯೂ ಐಪಿಪಿಬಿ ಮೂಲಕ ಖಾತೆಯನ್ನು ತೆರೆಯಬಹುದಾಗಿದೆ.

ಆಧಾರ್ ಸಂಖ್ಯೆ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಲಿಂಕ್ ಮಾಡದಿರುವವರು, ಪಡಿತರ ಚೀಟಿಯಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರಿದ್ದಾಗ ಅಥವಾ ಮುಖ್ಯಸ್ಥರೇ ಇಲ್ಲದಿದ್ದ ಸಂದರ್ಭದಲ್ಲಿ ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಾಗಿರುವುದು, ಬ್ಯಾಂಕ್‌ನಲ್ಲಿ ಇ-ಕೆವೈಸಿ ಪೂರ್ಣಗೊಳಿಸದಿರುವುದು, ಮೂರು ತಿಂಗಳಲ್ಲಿ ಒಂದು ತಿಂಗಳು ಸಹ ಪಡಿತರ ಪಡೆಯದಿರುವ ಪಡಿತರ ಚೀಟಿದಾರರಿಗೆ ಹಣ ಜಮೆಯಾಗಿಲ್ಲ. ಇಂತಹ ಫಲಾನುಭವಿಗಳು ಬ್ಯಾಂಕಿಗೆ ಭೇಟಿ ನೀಡಿ ಅವರ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಿಸಿ, ಖಾತೆಯನ್ನು ಸಕ್ರಿಯಗೊಳಿಸಿದ್ದಲ್ಲಿ ಮಾತ್ರ ಆಗಸ್ಟ್ ಮಾಹೆಗೆ ಸಂಬಂಧಿಸಿದಂತೆ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲು ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net