ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಬೈಕ್‌ರ‌್ಯಾಲಿ

14rajesh2
Published on

ಚಾಮರಾಜನಗರ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿಗಳ ಮೀಸಲಾತಿ ಜಾರಿ ಹೋರಾಟ ಸಮಿತಿಗಳ ಒಕ್ಕೂಟದ ವತಿಯಿಂದ ಸೋಮವಾರ ಬೈಕ್‌ರ‌್ಯಾಲಿ ನಡೆಸಲಾಯಿತು.

ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಮೆರವಣಿಗೆ ಮೂಲಕ ಸಾಗಿ ಜಿಲ್ಲಾಧಿಕಾರಿ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ಒಳಮೀಸಲಾತಿ ಜಾರಿಗೊಳಿಸುವಂತೆ ವಿವಿಧ ೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಮುಖಂಡ ಅರಕಲವಾಡಿ ನಾಗೇಂದ್ರ ಮಾತನಾಡಿ, ರಾಜ್ಯದಲ್ಲಿ ಸುಮಾರು 30 ವರ್ಷಗಳ ಕಾಲ ಮಾದಿಗ ಮತ್ತು ಇನ್ನಿತರೆ ತಳಸಮುದಾಯಗಳು ಒಳಮೀಸಲಾತಿಗಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಆದರೇ ಈ ಸಮುದಾಯಗಳು ಇಂದಿಗೂ ಸಾಕಷ್ಟು ಶೋಷಣೆಯನ್ನು ಅನುಭವಿಸುತ್ತಿದೆ. ಅನೇಕ ಕುಂಟು ನೆಪಗಳನ್ನು ಹೇಳುತ್ತಾ ಒಳಮೀಸಲಾತಿ ಹೋರಾಟಗಳನ್ನು ರಾಜ್ಯಸರ್ಕಾರಗಳು ಹತ್ತಿಕ್ಕುವ ಕೆಲಸವನ್ನು ಮಾಡಿದೆ. ಈಗ ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿಗೊಳಿಸುವುದು ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಚಾರವಾಗಿದೆ ಎಂದು ತೀರ್ಪು ನೀಡಿದೆ. ಅದಾಗ್ಯೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿಗೆ ಮೀನಾಮೇಷ ಎನಿಸುತ್ತಿದೆ ಎಂದು ದೂರಿದರು.

ಇತ್ತೀಚೆಗೆ ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅವರು ಒಳಮೀಸಲಾತಿ ಜಾರಿಗೆ ನಮ್ಮ ತಕರಾರು ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್‌ನತ್ತಾ ಬೆರಳು ತೋರುತ್ತಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಪರಿಶಿಷ್ಟಜಾತಿಯ ಎಲ್ಲಾ ಉಪಜಾತಿಗಳು ಸಂವಿಧಾನಾತ್ಮಕವಾಗಿರುವ ಒಳಮೀಸಲಾತಿ ಜಾರಿಗೆ ಹೋರಾಟ ಮಾಡುತ್ತಿದೆ. ಸಂವಿಧಾನವನ್ನು ರಕ್ಷಣೆ ಮಾಡುತ್ತೇವೆ ಎಂದು ಹೇಳುವ ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯ ಇದರ ವಿರುದ್ಧವಾಗಿದೆ ಎಂದು ಆರೋಪಿಸಿದರು.

ರಾಜ್ಯಸರ್ಕಾರ ಕೂಡಲೇ ಒಳಮೀಸಲಾತಿಯನ್ನು ಜಾರಿಗೊಳಿಸದಿದ್ದರೇ, ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಅ.16 ರಂದು ಬೃಹತ್ ಬೈಕ್‌ರ‌್ಯಾಲಿ ಹಮ್ಮಿಕೊಳ್ಳಲಾಗುತ್ತದೆ. ಇದರಿಂದ ಎಚ್ಚೆತ್ತುಕೊಂಡು ಸಾಮಾಜಿಕ ನ್ಯಾಯದ ಪರವಾಗಿರುವ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು. ಇಲ್ಲವಾದರೇ ಕಾಂಗ್ರೆಸ್ ಸರ್ಕಾರದ ಮುಖಮಂತ್ರಿ ಮತ್ತು ಸಚಿವರಿಗೆ ೇರಾವ್ ಹಾಕುವ ಕೆಲಸ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದಕ್ಕೂ ಮುನ್ನಾ ಕೊಳ್ಳೇಗಾಲ ಪಟ್ಟಣದಿಂದ ಹೊರಟ ಬೈಕ್‌ರ‌್ಯಾಲಿ ಯಳಂದೂರು ಪಟ್ಟಣ, ಸಂತೇಮರಹಳ್ಳಿ ಮಾರ್ಗವಾಗಿ ಸಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂತ್ಯವಾಯಿತು.

ಈ ವೇಳೆ ಪರಿಶಿಷ್ಟ ಜಾತಿಗಳ ಮೀಸಲಾತಿ ಜಾರಿ ಹೋರಾಟ ಸಮಿತಿಗಳ ಒಕ್ಕೂಟದ ಬೂದಿತಿಟ್ಟು ರಾಜೇಂದ್ರ, ಅರುಣ್‌ಕುಮಾರ್, ದ್ವಾರಕಿ, ಶಿವಮಲ್ಲು, ಹನುಮಂತು, ರಾಚಪ್ಪ, ಜವರಯ್ಯ, ಮೂಡಹಳ್ಳಿ ಮೂರ್ತಿ, ಮನು, ದೇವರಾಜ್, ಬಾಲು ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net