

ಚಾಮರಾಜನಗರ: ಮೈಸೂರಿನಲ್ಲಿ ವಿಶ್ವ ವಿಖ್ಯಾತ ದಸರಾ ಜಂಬೂ ಸವಾರಿಯ ಸಂಭ್ರಮ ಮನೆ ಮಾಡಿದ್ದಂತೆಯೇ ಪಕ್ಕದ ಜಿಲ್ಲೆ ಚಾಮರಾಜನಗರದಲ್ಲೂ ವಿಜಯದಶಮಿ ಸಡಗರ ತುಂಬಿತ್ತು.
ದಸರಾ ಜಂಬೂ ಸವಾರಿಯನ್ನು ನೋಡಲು ಜಿಲ್ಲೆಯ ಜನರು ತೆರಳಿದ್ದರು. ಹೀಗಾಗಿ ನಗರ ಮತ್ತು ಪಟ್ಟಣ ಪ್ರದೇಶಗಳು ಬಿಕೋ ಎನ್ನುತ್ತಿದ್ದವು. ಕಳೆದ ಕೆಲವು ದಿನಗಳಿಂದ ಚೆಲುವ ಚಾಮರಾಜನಗರ ದಸರಾ ಮಹೋತ್ಸವವನ್ನು ಕಣ್ತುಂಬಿಕೊಂಡಿದ್ದ ಜನರು ಮೈಸೂರು ದಸರಾ ಜಂಬೂ ಸವಾರಿಯನ್ನು ನೋಡಿ ಖುಷಿ ಪಟ್ಟರು. ಕುಟುಂಬ ಸಮೇತ ಮೈಸೂರಿಗೆ ತೆರಳಿ ದಸರಾ ಸಂಭ್ರಮದಲ್ಲಿ ಪಾಲ್ಗೊಂಡರು.
ಮಳೆ ಅಡ್ಡಿ: ಶನಿವಾರ ಎಡೆಬಿಡದೆ ಮಳೆ ಸುರಿಯಿತು. ಇದರಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಯಿತು. ಜಂಬೂ ಸವಾರಿ ನೋಡಲು ಮೈಸೂರಿಗೆ ಹೋಗಲು ಬಸ್‌ಗಾಗಿ ಕಾದು ನಿಂತಿದ್ದ ಜನರು ಮಳೆಯಲ್ಲಿ ನೆನೆದರು. ಹಬ್ಬದ ವಾತಾವರಣದಲ್ಲಿ ಹೊರಗೆ ಸುತ್ತಾಡಲು ಬಂದವರು ಮಳೆಯಲ್ಲಿ ನೆನೆದರು. ಮಳೆಯಿಂದಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನದ ವೇಳೆಗೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.
ದೇಗುಲಗಳಲ್ಲಿ ವಿಶೇಷ ಪೂಜೆ: ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಜಯದಶಮಿ ಹಿನ್ನೆಲೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಮಾಡಿದರು. ಚಾಮರಾಜನಗರ, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ, ಯಳಂದೂರು ತಾಲೂಕುಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ದೇವರಿಗೆ ಅಲಂಕಾರ ಮಾಡಲಾಗಿತ್ತು.
ಧಾರ್ಮಿಕ ಕೇಂದ್ರಗಳತ್ತ ಜನರು: ಜಿಲ್ಲೆಯ ಧಾರ್ಮಿಕ ಕೇಂದ್ರಗಳು ಮತ್ತು ಪ್ರವಾಸಿ ತಾಣಗಳಿಗೆ ಜನರು ಆಗಮಿಸಿದ್ದರು. ಹನೂರಿನ ಮಲೆ ಮಹದೇಶ್ವರ ಬೆಟ್ಟ, ಯಳಂದೂರಿನ ಬಿಳಿಗಿರಿರಂಗನಬೆಟ್ಟ, ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಇತರೆ ಧಾರ್ಮಿಕ ಕೇಂದ್ರಗಳಿಗೆ ಭಕ್ತರ ದಂಡು ಹರಿದುಬಂದಿತ್ತು. ಪರಿಸರ ಪ್ರೇಮಿಗಳು ಬಂಡೀಪುರ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಿಗೆ ಆಗಮಿಸಿದ್ದರು.
ಆಯುಧ ಪೂಜೆ ಸಂಭ್ರಮ: ವಿಶ್ವ ವಿಖ್ಯಾತ ಮೈಸೂರು ದಸರಾ ನವರಾತ್ರಿ ಹಬ್ಬದ ಭಾಗವಾಗಿರುವ ಆಯುಧ ಪೂಜೆ ಹಬ್ಬವನ್ನು ಜಿಲ್ಲಾದ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಯಿತು. ದೇವಸ್ಥಾನಗಳು, ಅಗ್ನಿಶಾಮಕ ದಳ ಕಚೇರಿ, ಸರ್ಕಾರಿ ಕಚೇರಿಗಳು, ಪೊಲೀಸ್ ಠಾಣೆ, ಕೆಎಸ್‌ಆರ್‌ಟಿಸಿ ಬಸ್ ಡಿಪೋ, ಲಾರಿ ಹಾಗೂ ಆಟೋ ನಿಲ್ದಾಣ, ಮನೆ, ಅಂಗಡಿಗಳಲ್ಲಿ ವಿಶೇಷ ಪೂಜೆ ನೆರವೇರಿತು. ಶಸಾಸ, ಯಂತ್ರಗಳು, ಸಾಧನಗಳನ್ನು ಹೂಗಳಿಮದ ಅಲಂಕರಿಸಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.
ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಕಂಡುಬಂದಿತು. ಹಬ್ಬದ ಹಿನ್ನೆಲೆಯಲ್ಲಿ ಭಕ್ತರು ಕುಟುಂಬ ಸಮೇತ ಆಗಮಿಸಿ ದೇವರ ದರ್ಶನ ಪಡೆದರು. ಅಂಗಡಿಗಳಲ್ಲಿ ಆಯುಧ ಪೂಜೆ ಹಬ್ಬ ಆಚರಣೆ ಮಾಡಲಾಯಿತು. ಸಂಬಂಧಿಕರು ಮತ್ತು ಸ್ನೇಹಿತರನ್ನು ಅಂಗಡಿಗೆ ಕರೆದು ಸಿಹಿ ಹಂಚಿದರು. ಮಧ್ಯಾಹ್ನದವರೆಗೂ ಗ್ಯಾರೇಜ್‌ಗಳಲ್ಲಿ ವಾಹನಗಳ ರಿಪೇರಿ, ಸ್ವಚ್ಛತೆ ನಡೆದ್ದಿದ್ದರಿಂದ ಅಂಗಡಿಗಳು ಭರ್ತಿಯಾಗಿದ್ದವು.
ಸರ್ಕಾರಿ ಕಚೇರಿಗಳಲ್ಲೂ ಆಯುಧ ಪೂಜೆ: ಜಿಲ್ಲಾ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲೂ ಆಯುಧ ಪೂಜೆ ಆಚರಣೆ ಮಾಡಲಾಯಿತು. ನಗರದ ಡಿವೈಎಸ್ಪಿ ಕಚೇರಿಯಲ್ಲಿ ಬೆಳಗ್ಗೆ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ಜಿಲ್ಲಾ ಸಶಸ ಮೀಸಲು ಪಡೆಯ ಕೇಂದ್ರದಲ್ಲಿ ಗನ್, ಪೊಲೀಸ್ ವ್ಯಾನ್, ಜೀಪ್, ಕಾರು ಸೇರಿದಂತೆ ಇತರ ವಸ್ತುಗಳಿಗೆ ಪೂಜೆ ಮಾಡಲಾಯಿತು. ನಗರದ ಭ್ರಮರಾಂಬ ಬಡಾವಣೆಯಲ್ಲಿರುವ ಅಗ್ನಿಶಾಮಕ ದಳ ಕಚೇರಿಯಲ್ಲಿ ಉಪಕರಣಗಳು ಮತ್ತು ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು.
ಖೋ-ಖೋ ಅಂಗಳದಲ್ಲಿ ಆಯುಧ ಪೂಜೆ:
ತಾಲೂಕಿನ ವೆಂಕಟಯ್ಯನಛತ್ರ ಗ್ರಾಮದಲ್ಲಿ ಯುವಕರು ಹಾಗೂ ಕ್ರೀಡಾಪಟುಗಳು ಕ್ರೀಡಾಂಗಣವನ್ನು ಹಾಗೂ ಕ್ರೀಡೆ ಸಾಮಗ್ರಿಗಳನ್ನು ಪೂಜೆ ಮಾಡುವ ಮುಖಾಂತರ ವಿಶೇಷ ರೀತಿಯಲ್ಲಿ ಆಯುಧ ಪೂಜೆಯನ್ನು ಆಚರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಮುಖಂಡ ಚಿಕ್ಕಮೊಳೆ ಮಹೇಶ್ ಮಾತನಾಡಿ, ನಾವು ಆಟ ಆಡುವ ಕ್ರೀಡಾಂಗಣವನ್ನು ಹಾಗೂ ಕ್ರೀಡೆ ಸಾಮಗ್ರಿಗಳನ್ನು ಪೂಜೆ ಮಾಡುವ ಮುಖಾಂತರ ಆಯುಧ ಪೂಜೆ ಆಚರಣೆ ಮಾಡುತ್ತಿರುವುದು ವಿಶೇಷವಾಗಿದೆ. ನಮ್ಮ ಈ ಭಾಗದಲ್ಲಿ ಯುವಕರು ಹಲವಾರು ಕ್ರೀಡೆಗಳಿಗೆ ಆಸಕ್ತಿಯಿಂದ ಭಾಗವಹಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಇದೇ ಮೊದಲ ಬಾರಿಗೆ ನಗರದಲ್ಲಿ ಆಯೋಜಿಸಿದ ದಸರಾ ಗ್ರಾಮೀಣ ಕ್ರೀಡಾಕೂಟದಲ್ಲಿ ವೆಂಕಟಯ್ಯನಛತ್ರ ಫ್ರೆಂಡ್ಸ್ ಕ್ಲಬ್ ತಂಡದವರು ಖೋ-ಖೋ, ಹಗ್ಗ-ಜಗ್ಗಾಟ, ಕ್ರಿಕೆಟ್‌ನಲ್ಲಿ ಭಾಗವಹಿಸಿ ಗೆದ್ದು ಪ್ರಶಸ್ತಿಯನ್ನು ಮುಡುಗಿರಿಸಿಕೊಂಡರು. ಇದರಿಂದ ತುಂಬಾ ಸಂತೋಷವಾಗಿದೆ. ಎಲ್ಲ ಆಟಗಾರರು ಕ್ರೀಡಾ ಸ್ಫೂರ್ತಿಯೊಂದಿಗೆ ಪಂದ್ಯಾಗಳಲ್ಲಿ ಭಾಗವಹಿಸಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮನೋಭಾವನೆಯನ್ನು ಪ್ರತಿಯೊಬ್ಬ ಯುವಕರು ಬೆಳೆಸಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯತಿ ಸದಸ್ಯ ಮುರುಗೇಶ್ ಮಾತನಾಡಿ, ನಮ್ಮೂರ ಯುವಕರು ಕ್ರೀಡೆಯ ಜತೆಗೆ ಆಯುಧ ಪೂಜೆ, ದೀಪಾವಳಿ, ಸಂಕ್ರಾಂತಿ ಇನ್ನೂ ಹಲವಾರು ವಿಶೇಷ ದಿನಗಳಲ್ಲಿ ಕ್ರೀಡಾಂಗಣವನ್ನು ಅಲಂಕಾರ ಮಾಡಿ ಪೂಜೆ ಮಾಡುವ ಮುಖಾಂತರ ವಿಶೇಷ ರೀತಿಯಲ್ಲಿ ಆಚರಣೆ ಮಾಡುತ್ತ ಬರುತ್ತಿದ್ದಾರೆ. ಗ್ರಾಮೀಣ ಭಾಗದ ಮಕ್ಕಳು ಕ್ರೀಡೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸ ಬೇಕು. ಇಂತಹ ಕ್ರೀಡಾಪಟುಗಳಿಗೆ ಹೆಚ್ಚು ಪ್ರೋತ್ಸಾಹ ಅಗತ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮೊದಲು ಫ್ರೆಂಡ್ಸ್ ಕ್ಲಬ್ ಕ್ರೀಡಾಪಟುಗಳು ವೆಂಕಟಯ್ಯನಛತ್ರ ಸರ್ಕಾರಿ ಪದವಿ ಪೂರ್ವ ಕಾಲೇಜ್ನ ಮೈದಾನದಲ್ಲಿ ಖೋ-ಖೋ ಹಾಗೂ ವಾಲಿಬಾಲ್ ಅಂಕಣವನ್ನು ಹಾಗೂ ಕ್ರೀಡೆ ಸಾಮಗ್ರಿಗಳನ್ನು ಸ್ವಚ್ಛತೆ ಮಾಡಿ, ರಂಗೋಲಿ ಬಿಡಿಸಿ, ಬಣ್ಣ ಹಾಗೂ ಹೂವುಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ನಂತರ ಪಟಾಕಿ ಸಿಡಿಸಿ ಸಿಹಿ ವಿತರಣೆ ಮಾಡಿ ಆಯುಧ ಪೂಜೆಯನ್ನು ಆಚರಣೆ ಮಾಡಿದರು.
ವೆಂಕಟಯ್ಯನಛತ್ರ ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಮೂರ್ತಿ ಮುಖಂಡರಾದ ಗೌಡಿಕೆ ನಂಜುಂಡಸ್ವಾಮಿ, ಗೌಡಿಕೆ ರಾಘವೇಂದ್ರ, ಮಹೇಶ್, ಪ್ರಭು, ಮಂಜು, ನವೀನ್, ತರಬೇತಿದಾರರಾದ ಸತೀಶ್, ರಾಜು ಹೊಸೂರು, ಭುವನೇಶ್, ಕ್ಲಬ್ ಸದಸ್ಯರಾದ ಮಣಿಕಂಠ, ಚಂದು, ಪ್ರಸಾದ್, ಆನಂದ್, ಸೂರ್ಯ, ಅರ್ಜುನ್, ದರ್ಶನ್, ಕೆಂಪರಾಜು, ವೆಂಕಟೇಶ್, ಮಹೇಶ್ ಮತ್ತು ಇತರರು ಇದ್ದರು.