

ಚಾಮರಾಜನಗರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಭೇಟಿನೀಡಿ ಮನವಿ ಸ್ವೀಕಾರ ಮಾಡಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ ಕಳೆದ ಅ.4ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ತಕ್ಷಣ ಇಲಾಖೆಯ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಕರೆ ಮಾಡಿ, ಸಮಸ್ಯೆಗಳ ಬಗೆಹರಿಸುವಂತೆ ನಿರ್ದೇಶನ ನೀಡಿದ್ದು, ಈಗಾಗಲೇ ಸಚಿವರು ರಾಜ್ಯಮಟ್ಟದ ಪದಾಧಿಕಾರಿಗಳ ಸಭೆಯನ್ನು ಮಧ್ಯಾಹ್ನ ಕರೆದಿದ್ದಾರೆ. ಈ ಸಭೆಯಲ್ಲಿ ಚರ್ಚೆ ನಡೆದು ನಿಮ್ಮೆಲ್ಲರ ಬೇಡಿಕೆಗಳು ಬಹುತೇಕ ಈಡೇರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಹಂತಗಳಲ್ಲಿ ಕರ್ತವ್ಯ ವಹಿಸುವ ಅಧಿಕಾರಿಗಳು ಹಾಗೂ ನೌಕರ ವರ್ಗ ಬಹಳ ಶ್ರಮ ಪಟ್ಟು ದುಡಿಯುತ್ತಿದ್ದಾರೆ. ಅವರಿಗೆ ಹೆಚ್ಚಿನ ಹೊರೆ ನೀಡುವ ಜತೆಗೆ ಅದಕ್ಕೆ ತಕ್ಕಂತೆ ಸಂಬಳ ಹಾಗೂ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಸರ್ಕಾರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಲಾಖೆಯ ಸಚಿವ ಪ್ರಿಯಾಂಕ ಖರ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳ ಲಾಬಿ ದೊಡ್ಡದಾಗಿದ್ದು, ವಿಧಾನಸೌಧ ಹಾಗು ಆಯಕಟ್ಟಿನ ಸ್ಥಳದಲ್ಲಿ ಕುಳಿತಿರುವ ಇಂಥ ಅಧಿಕಾರಿಗಳ ತಪ್ಪು ನಿರ್ಧಾರಗಳಿಂದ ಗೊಂದಲವಾಗುತ್ತಿದೆ. ಇದರ ಬಗ್ಗೆ ಸರ್ಕಾರ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಈ ಬಗ್ಗೆ ನನ್ನ ಸಹಮತ ಇದೆ. ವಿಧಾನಸಭೆ ಅಧಿವೇಶನದಲ್ಲಿಯು ಸಹ ಚರ್ಚೆ ಮಾಡುತ್ತೇನೆ ಎಂದು ಕೃಷ್ಣಮುರ್ತಿ ತಿಳಿಸಿದರು.
ಪಿಡಿಓ ನೌಕರರ ಸಂಘದ ಅಧ್ಯಕ್ಷ ಡಿ.ಕುಮಾರಸ್ವಾಮಿ ಹಾಗೂ ಪದಾಧಿಕಾರಿಗಳು ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಮೂಲಕ ಗ್ರಾ.ಪಂ. ಅಧಿಕಾರಿಗಳು, ನೌಕರರು ಹಾಗೂ ಸದಸ್ಯರ ಮನವಿಗೆ ಸರ್ಕಾರ ಸ್ಪಂದಿಸುವಂತೆ ತಾವು ಒತ್ತಡ ಹಾಕಬೇಕು ಎಂದು ಮನವಿ ಮಾಡಿಕೊಂಡರು.
ರಾಜ್ಯದ ಶೇ.68 ರಿಂದ 70 ಜನರಿಗೆ ಸ್ಥಳೀಯ ಸಂಸ್ಥೆಯಾದ ಗ್ರಾಮ ಪಂಚಾಯಿತಿಗಳಿಂದ ಶೇಕಡ 70ರಷ್ಟು ಸೇವೆಗಳನ್ನು ನೀಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಗ್ರಾಮ ಪಂಚಾಯತಿ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳು, ಗ್ರಾಮ ಪಂಚಾಯತಿಯ ಎಲ್ಲ ಪಂಚ ನೌಕರರಾದ ಕ್ಲರ್ಕ್ ಕಂ ಡಿಇಓ, ಕರವಸೂಲಿಗಾರರು, ಜಲಗಾರರು, ಕಛೇರಿ ಸಹಾಯಕರರು, ಸ್ವಚ್ಛತಾಗಾರರು ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂಬುವುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಹೊಂಗನೂರು ಚಂದ್ರು, ತಾಪಂ ಮಾಜಿ ಅಧ್ಯಕ್ಷ ಆರ್. ಮಹದೇವ್, ಕೇಶವಮೂರ್ತಿ, ಸಂಘದ ಗೌರವ ಅಧ್ಯಕ್ಷ ಎನ್.ಜಿ. ಮಾದಪ್ಪ, ಗ್ರಾ.ಪಂ. ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ಕೆಂಪರಾಜು, ಪ್ರಧಾನ ಕಾರ್ಯದರ್ಶಿ ಪುನೀತ್, ತಾಲೂಕು ಅಧ್ಯಕ್ಷ ಬಸಪ್ಪನಪಾಳ್ಯ ರೇವಣ್ಣ, ಎಸ್‌ಡಿಎ ಮತ್ತು ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಕೊತ್ತಲವಾಡಿ ಮಹದೇವಸ್ವಾಮಿ, ಡಿಇಓ ಸಂಘಗಳ ಅಧ್ಯಕ್ಷ ರಾಜೇಂದ್ರ, ರಾಜ್ಯ ಪರಿಷತ್ ಸದಸ್ಯ ಸುರೇಶ್, ಪ್ರಧಾನ ಕಾರ್ಯದರ್ಶಿ ಶಾಂತರಾಜು ಮತ್ತು ಇತರರು ಭಾಗವಹಿಸಿದ್ದರು.