ದಸರಾದಲ್ಲಿ ಗೊಂಬೆ ಕೂರಿಸುವ ಸಂಪ್ರದಾಯ ಶ್ರೇಷ್ಠ

12rajesh1
Published on

ಚಾಮರಾಜನಗರ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಗೊಂಬೆ ಕೂರಿಸುವ ಸಂಪ್ರದಾಯ ಶ್ರೇಷ್ಠ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಹೇಳಿದರು.

ನಗರದ ಶ್ರೀರಾಮ ಬಡಾವಣೆಯ ನಿವಾಸಿಗಳಾದ ಗಾಯತ್ರಿ ಮತ್ತು ಸತೀಶ್‌ಗೆ ಜೈ ಹಿಂದ್ ಪ್ರತಿಷ್ಠಾನದ ವತಿಯಿಂದ ಇತ್ತೀಚೆಗೆ ದಸರಾ ಗೊಂಬೆ ಕೂರಿಸುವುದರಲ್ಲಿ ಪ್ರಸಿದ್ಧರಾಗಿದ್ದ ಲೀಲಾವತಮ್ಮ ಮತ್ತು ಟಿ.ಕೆ. ನಂಜುಂಡಯ್ಯ ಹೆಸರಿನ ಪ್ರಶಸ್ತಿಯನ್ನು ನೀಡಿ ಮಾತನಾಡಿದರು.

ನಗರದ ಲೀಲಾವತಮ್ಮ ಮತ್ತು ಟಿ.ಕೆ.ನಂಜುಂಡಯ್ಯ ನಿವಾಸದಲ್ಲಿ ಆಧುನಿಕ ಕಾಲದಲ್ಲೂ ಗೊಂಬೆ ಇಡುವ ಪದ್ಧತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗುತ್ತಿರುವ ಮನೆಗಳಿಗೆ ಭೇಟಿ ನೀಡಿ ಪ್ರೋತ್ಸಾಹ ನೀಡಲಾಗುತ್ತಿದೆ. ವಿಜಯನಗರ ಕಾಲದಲ್ಲಿ ಆರಂಭವಾದ ಮತ್ತು ಪುರಾತನ ಕಾಲದಲ್ಲೂ ಗೊಂಬೆಗಳ ಆರಾಧನೆ ಮಾಡಲಾಗುತ್ತಿದೆ. ಗೊಂಬೆ ಇಡುವ ಮೂಲಕ ಲೌಕಿಕ ಮತ್ತು ಅಲೌಕಿಕ ಆನಂದವನ್ನು ಪಡೆಯಬಹುದು. ಇದರಲ್ಲಿ ಗಣಿತ, ವಿಜ್ಞಾನ, ಕೌಶಲ್ಯ ಕಲೆ, ವಾಸ್ತುಶಿಲ್ಪ, ಅಲಂಕಾರ, ಪ್ರಕೃತಿಯ ರಹಸ್ಯಗಳು ಅಡಕವಾಗಿವೆ ಎಂದರು.

ಗೊಂಬೆ ಕೂರಿಸುವ ಪದ್ಧತಿ ಹಿರಿಯರು ಮತ್ತು ಕಿರಿಯರಲ್ಲಿ ಅವಿನಾಭಾವ ಸಂಬಂಧ ಬೆಳೆಸುತ್ತದೆ. ಪರಸ್ಪರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಮನಸ್ಥಿತಿ ನಿರ್ಮಾಣವಾಗುತ್ತದೆ. ಗೊಂಬೆ ಪದ್ಧತಿಯನ್ನು ಹೆಚ್ಚು ಹೆಚ್ಚು ಮನೆಗಳಲ್ಲಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬ್ರಾಹ್ಮಿ ಮಹಿಳಾ ಸಂಘದ ಗೌರವಾಧ್ಯಕ್ಷೆ ವತ್ಸಲಾ ರಾಜಗೋಪಾಲ್ ಮಾತನಾಡಿ, ನವರಾತ್ರಿಯಲ್ಲಿ 10 ದಿನಗಳ ಕಾಲ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಪರಸ್ಪರ ನೆರೆಹೊರೆಯ ಜನರನ್ನು ಕರೆದು ವಿಶೇಷವಾಗಿ ಮಕ್ಕಳಿಗೆ ತಿಂಡಿಯನ್ನು ನೀಡಿ ಅವರ ಮನಸ್ಸನ್ನು ತೃಪ್ತಿಪಡಿಸಿ, ಸಂತೋಷ ಪಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದರು. ಚಾಮರಾಜನಗರದ ಟಿ.ಕೆ. ನಂಜುಂಡಯ್ಯ ಮನೆ ಗೊಂಬೆ ಮನೆಯಾಗಿ ಪ್ರಸಿದ್ಧಿಯಾಗಿತ್ತು. ಅವರ ಹೆಸರಿನಲ್ಲಿ ಜೈ ಹಿಂದ್ ಪ್ರತಿಷ್ಠಾನ ಪ್ರಶಸ್ತಿಯನ್ನು ನೀಡಿ ಸ್ಫೂರ್ತಿ ತುಂಬುತ್ತಿರುವುದು ಮೆಚ್ಚುವ ವಿಚಾರ ಎಂದರು. ಜೈ ಹಿಂದ್ ಪ್ರತಿಷ್ಠಾನದ ಕುಸುಮಾ ಋಗ್ವೇದಿ, ಸಚಿನ್, ಕಿರಣ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net