

ಚಾಮರಾಜನಗರ: ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಅ.15 ರಂದು ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಬೃಹತ್ ಪಾದಯಾತ್ರೆ ಅಯೋಜಿಸಲಾಗಿದೆ ಎಂದು ಒಕ್ಕೂಟದ ಎಂ.ಶಿವಮೂರ್ತಿ ಹೇಳಿದರು.
ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಮಾಡಲು ಆಯಾಯ ರಾಜ್ಯಗಳಿಗೆ ಪರಮಾಧಿಕಾರವಿದೆ. ಅದರಂತೆ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಲು ಗಮನ ಸೆಳೆಯುವ ಸಲುವಾಗಿ ಒಳ ಮೀಸಲಾತಿ ಜಾರಿಗಾಗಿ ಪಾದಯಾತ್ರೆಯನ್ನು ಅಯೋಜಿಸಲಾಗಿದೆ. ಅಂದು ಬೆಳಿಗ್ಗೆ 10.30 ಗಂಟೆಗೆ ಮಾದಪುರ ಗ್ರಾಮದಿಂದ ಪಾದಯಾತ್ರೆ ಆರಂಭವಾಗಲಿದ್ದು, ಈ ಪಾದಯಾತ್ರೆಯಲ್ಲಿ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಸಮುದಾಯ ಸುಮಾರು 30 ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬರಲಾಗಿದ್ದು, ಮುಖ್ಯಮಂತ್ರಿಗಳು ಮುಂದಿನ ಸಚಿವ ಸಂಪುಟದಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಸವನಪುರ ರಾಜಶೇಖರ ಮಾತನಾಡಿ, ರಾಜ್ಯದಲ್ಲಿರುವ ಮಾದಿಗ ಸಮುದಾಯ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಸಾಕಷ್ಟು ಹಿಂದುಳಿದಿದೆ. ಸ್ವಾತಂತ್ರ್ಯ ಬಂದರೂ ಕೂಡ ಇನ್ನೂ ಗುಡಿಸಲಿನಲ್ಲಿ ವಾಸಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶಿಷ್ಟ ಜಾತಿಯಲ್ಲಿ ಬರುವ 101 ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಜಾರಿಗೊಳಿಸಿ ಸಮುದಾಯಕ್ಕೆ ನ್ಯಾಯ ಕೊಡಿಸಿಕೊಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಗೌರವಾಧ್ಯಕ್ಷ ಪಾಳ್ಯ ರಾಚಪ್ಪ,
ಜಿಲ್ಲಾ ಮಾದಿಗ ಒಕ್ಕೂಟದ ಮುಖಂಡ ಕೆಸ್ತೂರು ಮರಪ್ಪ, ಸಂತೇಮರಹಳ್ಳಿ ರಾಜು, ಗುರುಲಿಂಗಯ್ಯ ಹಾಗೂ ಇತರರು ಹಾಜರಿದ್ದರು.