ಚಾಮರಾಜನಗರ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಸಾರಿಗೆ ಬಸ್ ಆಕಸ್ಮಿಕವಾಗಿ ಹಿಮ್ಮುಖವಾಗಿ ಚಲಿಸಿ ನಿರ್ವಾಹಕನಿಗೆ ಗಂಭೀರ ಗಾಯವಾಗಿದೆ.
ತಾಲೂಕಿನ ಕೆರೆಹಳ್ಳಿ ಗ್ರಾಮದ ಸುನೀಲ್ (34) ಅವರ ಪಕ್ಕೆಲುಬಿಗೆ ತೀವ್ರ ಪೆಟ್ಟಾಗಿದ್ದು, ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಗರದ ಡಿವಿಯೇಷನ್ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮೈಸೂರು ಮಾರ್ಗವಾಗಿ ಸಂಚರಿಸುವ ಬಸ್‌ಗಳು ನಿಲ್ಲುವ ಜಾಗದಲ್ಲಿ ಚಾಲಕ ಬಸ್ ನಿಲ್ಲಿಸಲು ಮುಂದಾಗಿದ್ದಾನೆ. ಮುಂದೆ ಪ್ರಯಾಣಿಕರು ಅಡ್ಡಲಾಗಿ ಬಂದಾಗ ಇಳಿಜಾರಿನಲ್ಲಿ ಆಕಸ್ಮಿಕವಾಗಿ ಬಸ್ ಹಿಂದಕ್ಕೆ ಚಲಿಸಿದೆ. ಈ ವೇಳೆ ಎರಡು ಬಸ್‌ಗಳ ನಡುವೆ ಚಾಲಕ ಸಿಲುಕಿ ಪೆಟ್ಟಾಗಿದೆ.
ಸದ್ಯ ಚಾಮರಾಜನಗರ ವೈದ್ಯಕೀಯ ಆಸ್ಪತ್ರೆಗೆ ಚಿಕಿತ್ಸೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೊಂದು ಆಕಸ್ಮಿಕ ಘಟನೆಯಾಗಿದ್ದು, ನಿರ್ವಾಹಕ ಸುನೀಲ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಡಿಪೋ ಮ್ಯಾನೇಜರ್ ಕುಮಾರ್‌ನಾಯಕ್ ವಿಜಯವಾಣಿಗೆ ಮಾಹಿತಿ ನೀಡಿದರು.