ಮಳೆಗೆ ಅಪಾರ ಪ್ರಮಾಣದ ಬಾಳೆ ನಾಶ

03rajesh8
Published on

ಚಾಮರಾಜನಗರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ರಾತ್ರಿ ಸುರಿದ ಮಳೆ-ಗಾಳಿಯಿಂದಾಗಿ ಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾಗಿದೆ.

ತಾಲೂಕಿನ ನಲ್ಲೂರು, ಹೊಂಡರಬಾಳು ಹಾಗೂ ಇನ್ನಿತರೆ ಗ್ರಾಮಗಳ ರೈತರ ನೂರಾರು ಎಕರೆ ಜಮೀನುಗಳಲ್ಲಿ ಬೆಳೆದಿದ್ದ ಬಾಳೆ ರಾತ್ರಿಯ ಗಾಳಿ-ಮಳೆಗೆ ನೆಲಕಚ್ಚಿದ್ದು, ಹತ್ತಾರು ರೈತರು ಸಂಕಷ್ಟ ಅನುಭವಿಸುವಂತಾಗಿದೆ. ನಲ್ಲೂರು ಗ್ರಾಮದ ರೈತ ಡಿಕ್ಕಿ ಮಹದೇವ ಎಂಬುವವರಿಗೆ ಸೇರಿದ ಸುಮಾರು 8000 ಕಟ್ಟೆ, ವೆಂಕಟೇಶ್ ಅವರ ಸುಮಾರು 12 ಎಕರೆ ಜಮೀನಿನಲ್ಲಿ ಇದ್ದ ಬಾಳೆಯನ್ನು ಒಳಗೊಂಡಂತೆ 20 ಸಾವಿರ ಕಟ್ಟೆ ನಾಶವಾಗಿದೆ. ಪಂಚೆ ಸೋಮೇಶ್ವರ್ ಅವರ ಜಮೀನಿನಲ್ಲಿ ಇದ್ದ 3000 ಕಟ್ಟೆ, ಕಾಳೇಗೌಡ 4000, ದಕ್ಷರಿ 3000 ಹಾಗೂ ಶಿವರಾಮು ಎಂಬುವವರಿಗೆ ಸೇರಿದ 2500 ಕಟ್ಟೆ ಬಾಳೆ ನೆಲಕಚ್ಚಿದೆ.

ಅದಲ್ಲದೇ ಹೊಂಡರುಬಾಳು ಗ್ರಾಮದ ಚಿನ್ನಸ್ವಾಮಿ ಎಂಬುವವರಿಗೆ ಸೇರಿದ 9000 ಕಟ್ಟೆ, ರಾಜೇಂದ್ರ ಅವರ 2 ಎಕರೆ ಜಮೀನಿನಲ್ಲಿ ಇದ್ದ 2000 ಕಟ್ಟೆ ಹಾಗೂ ಕುಮಾರಸ್ವಾಮಿ ಅವರ 2000 ಕಟ್ಟೆ ಬಾಳೆ ಸಂಪೂರ್ಣವಾಗಿ ನೆಲಕಚ್ಚಿದೆ. ಒಟ್ಟಾರೆಯಾಗಿ ಸುಮಾರು 100 ಎಕರೆಗಳಿಗಿಂತಲೂ ಹೆಚ್ಚು ಬಾಳೆ ನಾಶವಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಾಳೆ ಇನ್ನೇನು 15 ದಿನಗಳ ಒಳಗೆ ಕಟಾವಿಗೆ ಬರುವಂತಿತ್ತು. ಆಗಾಗಿ ರೈತರಿಗೆ ಲಕ್ಷಾಂತರ ರೂ, ನಷ್ಟವಾಗಿದೆ. ಇನ್ನೇನೋ ಬೆಳೆ ಕೈಗೆ ಸಿಗಬೇಕು ಎನ್ನುವಷ್ಟರಲ್ಲಿ ಬುಧವಾರ ರಾತ್ರಿ ಸುರಿದ ಮಳೆ ಬಾಳೆಯನ್ನು ನಾಶ ಮಾಡಿದೆ. ಸುಮಾರು 20 ಎಕರೆಯಲ್ಲಿ ಬೆಳೆದಿದ್ದ ಬಾಳೆ ಸಂಪೂರ್ಣವಾಗಿ ನೆಲಕಚ್ಚಿದೆ. ಲಕ್ಷಾಂತರ ರೂ, ನಷ್ಟವಾಗಿದೆ ಎಂದು ರೈತ ಡಿಕ್ಕಿ ಮಹದೇವ ವಿಜಯವಾಣಿ ಜತೆಗೆ ಮಾತನಾಡಿ ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net