

ಚಾಮರಾಜನಗರ: ಇತಿಹಾಸ ಪ್ರಸಿದ್ಧ ಶ್ರೀವಿದ್ಯಾಗಣಪತಿ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿರುವ ಶ್ರೀ ಅಯೋಧ್ಯೆ ಗಣಪತಿ ವಿಸರ್ಜನಾ ಮಹೋತ್ಸವ ಅ.4 ರಂದು ನಡೆಯಲಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ನಗರದ ರಥದ ಬೀದಿಯಲ್ಲಿರುವ ಗುರುನಂಜಶೆಟ್ಟರ ಛತ್ರದ ಮುಂಭಾಗದಿಂದ ಬೆಳಿಗ್ಗೆ 9.30 ಗಂಟೆಗೆ ಶ್ರೀಅಯೋಧ್ಯೆ ಗಣಪತಿ ವಿಸರ್ಜನಾ ಮಹೋತ್ಸವ ಮೆರವಣಿಗೆ ಹೊರಟು ಖಡಕ್ ಮೊಹಲ್ಲಾ, ಡಾ.ಬಿ.ಆರ್.ಅಂಬೇಡ್ಕರ್ ಬೀದಿ, ಡೀವಿಯೇಷನ್ ರಸ್ತೆ, ದೇವಾಂಗ 3ನೇ ಬೀದಿ, ನಾಗಪ್ಪಶೆಟ್ಟರ ಚೌಕ, ದೊಡ್ಡಂಗಡಿ ಬೀದಿ, ಗಾಡಿಪೇಟೆ ಚೌಕ, ಮೇಗಲನಾಯಕರ ಬೀದಿ, ಶ್ರೀಕನ್ನಿಕಾಪರಮೇಶ್ವರಿ ದೇವಸ್ಥಾನದ ರಸ್ತೆ, ನಾಗಪ್ಪಶೆಟ್ಟರ ಚೌಕ, ದೊಡ್ಡಂಗಡಿ ಬೀದಿ, ಚಿಕ್ಕಅಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ವೀರಮದಕರಿನಾಯಕರ ಬೀದಿ, ಶ್ರೀಭಗೀರಥ ಉಪ್ಪಾರ ಬಡಾವಣೆ, ಶ್ರೀಆದಿಶಕ್ತಿ ದೇವಸ್ಥಾನ, ಬಣಜಿಗರ ಬೀದಿ, ಭ್ರಮರಾಂಬ 2ನೇ ಕ್ರಾಸ್, ಭ್ರಮರಾಂಬ 1ನೇ ಕ್ರಾಸ್, ಕುರುಬರ ಬೀದಿ, ಹಳ್ಳದ ಬೀದಿ, ಅಗ್ರಹಾರ ಬೀದಿ, ನಗರಸಭಾ ಕಚೇರಿ ರಸ್ತೆ, ಚಮಾಲ್ ಬೀದಿ, ವೀರಭದ್ರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜೈನರ ಬೀದಿ, ಕೊಳದ ಬೀದಿಯಲ್ಲಿ ಸಾಗಿ ದೊಡ್ಡರಸನ ಕೊಳದಲ್ಲಿ ಗಣಪತಿಯ ವಿಸರ್ಜನೆ ನಡೆಯಲಿದೆ.
ವಿವಿಧ ಕಲಾತಂಡಗಳು ಭಾಗಿ:
ಶ್ರೀ ಅಯೋಧ್ಯೆ ಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಕೇರಳದ ಸಿಂಗಾರಿ ಮೇಳ, ವೀರಗಾಸೆ, ಡೊಳ್ಳುಕುಣಿತ, ಗೊರವರ ಕುಣಿತ, ನಂದಿಕಂಬ, ನಗಾರಿ, ಪೂಜಾ ಕುಣಿತ, ವಿಶೇಷವಾಗಿ ಮಹಿಳಾ ವೀರಗಾಸೆ ಜತೆಗೆ ಸುಮಾರು 15 ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಎಲ್ಲ ಸಮುದಾಯದ ಮುಖಂಡರು, ಎಲ್ಲ ಪಕ್ಷಗಳ ಮುಖಂಡರು ಕೂಡ ಭಾಗವಹಿಸಲಿದ್ದಾರೆ. ವಿಸರ್ಜನಾ ಮಹೋತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿದ್ಯಾಗಣಪತಿ ಮಂಡಳಿಯ ಅಧ್ಯಕ್ಷ ಸುಂದರ್ ರಾಜ್ ವಿಜಯವಾಣಿಗೆ ಮಾಹಿತಿ ನೀಡಿದರು.
ಬಿಗಿ ಪೊಲೀಸ್ ಬಂದೋಬಸ್ತ್:
ಶ್ರೀಅಯೋಧ್ಯೆ ಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನಗರದ ಪ್ರಮುಖ ಬೀದಿಗಳಲ್ಲಿ ಬುಧವಾರ ಸಂಜೆ ಪಥಸಂಚಲನ ನಡೆಸಿದ್ದರು. ಒಬ್ಬರು ಎಎಸ್‌ಪಿ, ಐವರು ಡಿವೈಎಸ್‌ಪಿ, ಕಮಾಂಡೊ ಪಡೆ, 5 ಕೆಎಸ್‌ಆರ್‌ಪಿ ತುಕಡಿಗಳು, 100 ಜನ ಗೃಹರಕ್ಷಕರು ಸೇರಿದಂತೆ 700-800 ಜನ ಪೊಲೀಸರನ್ನು ನಿಯೋಜಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳು ಹಾಗೂ ಡ್ರೋಣ್ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗಿದೆ ಎಂದು ಎಸ್ಪಿ ಡಾ.ಬಿ.ಟಿ.ಕವಿತಾ ವಿಜಯವಾಣಿಗೆ ಮಾಹಿತಿ ನೀಡಿದರು.
ಮೆರವಣಿಗೆ ಮಾರ್ಗ ಪರಿಶೀಲನೆ:
ಶ್ರೀಅಯೋಧ್ಯೆ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಗಣಪತಿ ಮೂರ್ತಿ ಮೆರವಣಿಗೆ ಸಾಗುವ ಮಾರ್ಗಗಳನ್ನು ನಗರಸಭಾ ಆಯುಕ್ತ ರಾಮದಾಸ್ ಪರಿಶೀಲಿಸಿದರು. ಮೆರವಣಿಗೆ ಸಾಗುವ ದಾರಿಗಳಲ್ಲಿರುವ ರಸ್ತೆ ಡುಬ್ಬಗಳನ್ನು ತೆರವು ಮಾಡುವ ತೆಗೆ ಹಳ್ಳಕೊಳ್ಳಗಳನ್ನು ಮುಚ್ಚುವಂತೆ ಸೂಚನೆ ನೀಡಿದರು. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಸ್ವಚ್ಛತೆ, ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚಿಸಿದರು. ಅಲ್ಲದೇ ಮೆರವಣಿಗೆಗೆ ಯಾವುದೇ ತೊಂದರೆಗಳಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪಿ.ಸುಧಾ, ನಗರಸಭೆಯ ಎಇಇ ನಟರಾಜು, ಹಿರಿಯ ಆರೋಗ್ಯಧಿಕಾರಿ ಸುಷ್ಮಾ, ಮಂಜುನಾಥ್, ನಾರಾಯಣಸ್ವಾಮಿ, ಕಿರಿಯ ನಿರೀಕ್ಷಣಾಧಿಕಾರಿ ಪುಷ್ಪಾ, ಮೇಲ್ವಿಚಾರಕ ಪ್ರಸಾದ್, ಸಂತೋಷ್ ಹಾಜರಿದ್ದರು.