

ಯಳಂದೂರು: ಪಟ್ಟಣದಲ್ಲಿ ಆಯುಧ ಪೂಜೆ ಮುನ್ನಾ ದಿನವಾದ ಗುರುವಾರ ಹೂವು, ಹಣ್ಣು, ಬಾಳೆಕಂದು ಸೇರಿದಂತೆ ಅಗತ್ಯ ಸಾಮಗ್ರಿಗಳ ಖರೀದಿ ಜೋರಾಗಿತ್ತು.
ಪಟ್ಟಣದ ದೊಡ್ಡ ಅಂಗಡಿ ಬೀದಿ, ಹಳೇ ಅಂಚೆ ಕಚೇರಿ ರಸ್ತೆ, ಬಳೇಪೇಟೆ ಸೇರಿದಂತೆ ಇತರ ಕಡೆಗಳಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ ಜನರು ಹೂ, ಹಣ್ಣು, ಬಾಳೆಕಂದು ಬೂದುಗುಂಬಳ ಕಾಯಿ ಸೇರಿದಂತೆ ಇತರ ವಸ್ತುಗಳನ್ನು ಖರೀದಿಸಿದರು.
ಹೂ, ಹಣ್ಣು, ಬಾಳೆಕಂದು, ಬೂದುಗುಂಬಳ ಸೇರಿದಂತೆ ಇತರ ವಸ್ತುಗಳ ಬೆಲೆ ಏರಿಕೆಯಾಗಿತ್ತು. ಚೆಂಡು ಹೂ ಕೆಜಿಗೆ 80 ರಿಂದ 100 ರೂ., ಒಂದು ಜತೆ ಬಾಳೆಕಂದಿಗೆ 25 ರೂ., ಬೂದುಗುಂಬಳ ಕಿಲೋಗೆ 35 ರೂ. ದರವಿತ್ತು. ಚೆಂಡು ಹೂವು ಕಿಲೋಗೆ 100 ರೂ., ಸೇವಂತಿಗೆ ಮೀಟರ್‌ಗೆ 60 ರಿಂದ 80 ರೂ.ಗೆ ಮಾರಾಟವಾಯಿತು. ಹಣ್ಣುಗಳ ಬೆಲೆಯಲ್ಲೂ ಏರಿಕೆ ಕಂಡು ಬಂದಿತು. ಏಲಕ್ಕಿ ಬಾಳೆ ಕಿಲೋಗೆ 60 ರೂ., ಪಚ್ಚಬಾಳೆ 30 ರೂ., ಸೇಬು 120 ರೂ., ದ್ರಾಕ್ಷಿ 100 ರೂ., ದಾಳಿಂಬೆ 80 ರೂ., ಮೂಸಂಬಿ 60 ರೂ. ಬೆಲೆ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಸ್ತುಗಳ ಬೆಲೆಯಲ್ಲೂ ಏರಿಕೆ ಕಂಡುಬಂದಿತು. ಆದರೆ ಖರೀದಿಸುವವರ ಸಂಖ್ಯೆ ಕಡಿಮೆಯಾಗಿರಲಿಲ್ಲ.
ಇದರೊಂದಿಗೆ ವಾಹನಗಳ ಅಲಂಕಾರಿಕ ವಸ್ತುಗಳ ಮಾರಾಟ ಜೋರಾಗಿತ್ತು. ಪಟ್ಟಣದ ಕಾವೇರಿ ಗ್ರಾಮೀಣ ಬ್ಯಾಂಕ್ ಬಳಿಯ ಅಂಗಡಿ ಹಾಗೂ ಬಳೇಪೇಟೆಯ ಎರಡು ಅಂಗಡಿಗಳ ಮುಂದೆ ಹೆಚ್ಚಾಗಿ ಯುವಕರು ಶಾಲಾ ಮಕ್ಕಳು ವಾಹನಗಳ ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಕಂಡುಬಂದಿತು. ಪಟ್ಟಣ ಪಂಚಾಯಿತಿ ಕಚೇರಿ ಸೇರಿದಂತೆ ಪಟ್ಟಣದ ಕೆಲವು ಸರ್ಕಾರಿ ಕಚೇರಿಗಳಲ್ಲಿ ಬುಧವಾರವೇ ಆಯುಧ ಪೂಜೆ ಆಚರಿಸಲಾಯಿತು.