ಚಾಮರಾಜನಗರ: ತಾಲೂಕಿನ ರಾಮಸಮುದ್ರ ಗ್ರಾಮದಿಂದ ದೊಡ್ಡಕೆರೆಗೆ ತೆರಳುವ ಮಾರ್ಗಮಧ್ಯೆ ಇರುವ ಜಮೀನಿನ ಕಬ್ಬಿನ ಗದ್ದೆಯಲ್ಲಿ ಚಿರತೆ ಕಾಣಿಸಿಕೊಂಡು ಆತಂಕವನ್ನು ಉಂಟುಮಾಡಿದೆ.
ಬೆಳಿಗ್ಗೆ ಎಂದಿನಂತೆ ರೈತ ವೆಂಕಟಾಚಲ ನಾಯಕ ತೆರಳಿದ್ದರು, ಈ ವೇಳೆ ಚಿರತೆಯನ್ನು ಕಂಡು ಗಾಬರಿಯಾಗಿದ್ದಾರೆ. ತಕ್ಷಣ ಸಮೀಪದಲ್ಲಿದ್ದ ಇತರರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬರುವಷ್ಟರಲ್ಲಿ ಚಿರತೆ ಓಡಿಹೋಗಿದೆ. ಚಿರತೆ ಇದ್ದ ಜಾಗದಲ್ಲಿ ಹೋಗಿ ನೋಡಿದಾಗ ನವಿಲೊಂದು ಮೃತಪಟ್ಟಿರುವುದು ಕಂಡುಬಂದಿದೆ.
ಕೂಡಲೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂದು ಪರಿಶೀಲನೆ ನಡೆಸಿದರು. ಈ ಭಾಗದಲ್ಲಿ ಪದೇಪದೇ ಚಿರತೆ ಕಾಣಿಸಿಕೊಳ್ಳುತ್ತಿದ್ದು, ರೈತರು ಆತಂಕದಲ್ಲೇ ಇರುವಂತಾಗಿದೆ. ಈ ನಿಟ್ಟಿನಲ್ಲಿ ಚಿರತೆ ಸೆರೆಗೆ ಬೋನು ಅಳವಡಿಸುವಂತೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.