ಶ್ರೀಅಯೋಧ್ಯೆ ಗಣಪತಿ ವಿಸರ್ಜನೆ

04rajesh1
Published on

ಚಾಮರಾಜನಗರ: ಇತಿಹಾಸ ಪ್ರಸಿದ್ಧ ಶ್ರೀವಿದ್ಯಾ ಗಣಪತಿ ಮಂಡಳಿ ವತಿಯಿಂದ ಪ್ರತಿವರ್ಷವೂ ಆಯೋಜಿಸಿಸುವ ಶ್ರೀಗಣಪತಿಮೂರ್ತಿ ವಿಸರ್ಜನಾ ಮಹೋತ್ಸವ ಬಹಳ ಅದ್ಧೂರಿಯಾಗಿ ನೆರವೇರಿತು.

ನಗರದ ರಥದ ಬೀದಿಯಲ್ಲಿರುವ ಗುರುನಂಜಶೆಟ್ಟರ ಛತ್ರದ ಮುಂಭಾಗ ಪ್ರತಿವರ್ಷದಂತೆ ಈ ವರ್ಷವೂ ಅಯೋಧ್ಯೆ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಸುಮಾರು 1 ವಾರಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು. ಅದರಂತೆ ಶುಕ್ರವಾರ ಶ್ರೀವಿದ್ಯಾಗಣಪತಿ ಮಂಡಳಿತ ಪದಾಧಿಕಾರಿಗಳು ಹಾಗೂ ಹಲವು ರಾಜಕೀಯ ಮುಖಂಡರ ನೇತೃತ್ವದಲ್ಲಿ ಶ್ರೀ ಅಯೋಧ್ಯೆ ಗಣಪತಿ ವಿಸರ್ಜನಾ ಮಹೋತ್ಸವದ ಮೆರವಣಿಗೆಗೆ ಸಾವಿರಾರು ಜನರ ಸಮ್ಮುಖದಲ್ಲಿ, ಹತ್ತಾರು ಜಾನಪದ ಕಲಾತಂಡಗಳ ಮೆರುಗಿನಲ್ಲಿ ಬೆಳಿಗ್ಗೆ 9.30 ಗಂಟೆಗೆ ಚಾಲನೆ ನೀಡಲಾಯಿತು.

ಬಳಿಕ ಗುರುನಂಜಶೆಟ್ಟರ ಛತ್ರದ ಮುಂಭಾಗದಿಂದ ಪ್ರಾರಂಭವಾದ ಶ್ರೀಅಯೋಧ್ಯೆ ಗಣಪತಿ ವಿಸರ್ಜನಾ ಮಹೋತ್ಸವ ಮೆರವಣಿಗೆ ಖಡಕ್ ಮೊಹಲ್ಲಾ, ಡಾ.ಬಿ.ಆರ್.ಅಂಬೇಡ್ಕರ್ ಬೀದಿ, ಡೀವಿಯೇಷನ್ ರಸ್ತೆ, ದೇವಾಂಗ 3ನೇ ಬೀದಿ, ನಾಗಪ್ಪಶೆಟ್ಟರ ಚೌಕ, ದೊಡ್ಡಂಗಡಿ ಬೀದಿ, ಗಾಡಿಪೇಟೆ ಚೌಕ, ಮೇಗಲನಾಯಕರ ಬೀದಿ, ಶ್ರೀಕನ್ನಿಕಾಪರಮೇಶ್ವರಿ ದೇವಸ್ಥಾನದ ರಸ್ತೆ, ನಾಗಪ್ಪಶೆಟ್ಟರ ಚೌಕ, ದೊಡ್ಡಂಗಡಿ ಬೀದಿ, ಚಿಕ್ಕಅಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ವೀರಮದಕರಿನಾಯಕರ ಬೀದಿ, ಶ್ರೀಭಗೀರಥ ಉಪ್ಪಾರ ಬಡಾವಣೆ, ಶ್ರೀಆದಿಶಕ್ತಿ ದೇವಸ್ಥಾನ, ಬಣಜಿಗರ ಬೀದಿ, ಭ್ರಮರಾಂಬ 2ನೇ ಕ್ರಾಸ್, ಭ್ರಮರಾಂಬ 1ನೇ ಕ್ರಾಸ್, ಕುರುಬರ ಬೀದಿ, ಹಳ್ಳದ ಬೀದಿ, ಅಗ್ರಹಾರ ಬೀದಿ, ನಗರಸಭಾ ಕಚೇರಿ ರಸ್ತೆ, ಚಮಾಲ್ ಬೀದಿ, ವೀರಭದ್ರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜೈನರ ಬೀದಿ, ಕೊಳದ ಬೀದಿಯಲ್ಲಿ ಸಾಗಿ ದೊಡ್ಡರಸನ ಕೊಳದಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜನರು ಗಣಪತಿ ಮೂರ್ತಿಗೆ ಪೂಜೆ ಮಾಡಿಸಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ನೂರಾರು ಯುವಕರು ಶ್ರೀರಾಮ, ಹನುಮ ಭಾವಚಿತ್ರವಿದ್ದ ಕೇಸರಿ ಧ್ವಜಗಳನ್ನು ಹಾರಿಸಿ, ಕೇಸರಿ ಶಾಲುಗಳನ್ನು ತೊಟ್ಟು ಸಂಭ್ರಮಿಸಿದರು. ತಮಟೆ, ಡೊಳ್ಳಿನ ಸದ್ದಿಗೆ ಕುಣಿದು ಕುಪ್ಪಳಿಸಿದರು. ಭಜರಂಗದಳ ಸಂಘಟನೆಯ ಯುವಕರು ಸಮವಸಗಳನ್ನು ಧರಿಸಿ, ವಿವಿಧ ೋಷಣೆಗಳನ್ನು ಕೂಗುವ ಮೂಲಕ ಮೆರವಣಿಗೆಗ ಹುರುಪು ತುಂಬಿದರು. ಈ ವೇಳೆ ಶ್ರೀವಿದ್ಯಾಗಣಪತಿ ಮಂಡಳಿಯ ಪದಾಧಿಕಾರಿಗಳು, ಹಲವು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿವಿಧ ಕಲಾತಂಡಗಳು ಭಾಗಿ:
ಶ್ರೀ ಅಯೋಧ್ಯೆ ಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಜಾನಪದ ಕಲಾತಂಡಗಳು ನೋಡುಗರ ಗಮನಸೆಳೆಯಿತು. ಕೇರಳದ ಶ್ರೀಚಾಮುಂಡೇಶ್ವರಿಯ 5 ಅವತಾರಗಳನ್ನು ಹೋಲುವ ಕಲಾತಂಡ ಮತ್ತು ಚೆಂಡೆ ವಾದನ ಬಹಳ ಆಕರ್ಷಕವಾಗಿತ್ತು. ಅದಲ್ಲದೇ ವೀರಗಾಸೆ, ಡೊಳ್ಳುಕುಣಿತ, ಗೊರವರ ಕುಣಿತ, ಗಾರುಡಿಗರ ಗೊಂಬೆ, ನಾದಸ್ವರ ಹಾಗೂ ಇನ್ನಿತರೆ ಜಾನಪದ ಕಲಾತಂಡಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ತುಂಬಿತು. ವಿಶೇಷವಾಗಿ ಮಹಿಳೆಯರ ವೀರಗಾಸೆ ನೋಡುಗರ ಗಮನ ಸೆಳೆಯಿತು.

ಬಿಗಿ ಪೊಲೀಸ್ ಬಂದೋಬಸ್ತ್:
ಶ್ರೀಅಯೋಧ್ಯೆ ಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಪೊಲೀಸ್ ಇಲಾಖೆ ವತಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು. ಎಸ್ಪಿ, ಎಎಸ್ಪಿ, ಡಿವೈಎಸ್ಪಿ, ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್, ಕಮಾಂಡೊ ಪಡೆ, 5 ಕೆಎಸ್‌ಆರ್‌ಪಿ ತುಕಡಿಗಳು, 100 ಜನ ಗೃಹರಕ್ಷಕರು ಸೇರಿದಂತೆ 700-800 ಜನ ಪೊಲೀಸರನ್ನು ನಿಯೋಜಿಸಲಾಗಿತ್ತು. ಸಿಸಿಟಿವಿ ಕ್ಯಾಮೆರಾಗಳು ಹಾಗೂ ಡ್ರೋಣ್ ಕ್ಯಾಮೆರಾಗಳ ಮೂಲಕ ನಿಗಾವಹಿಸಲಾಗಿತ್ತು. ಅದಲ್ಲದೇ ವಿವಿಧ ಇಲಾಖೆಗಳ ನೂರಾರು ಅಧಿಕಾರಿಗಳನ್ನು ಕಣ್ಗಾವಲು ಹಿಡಲಾಗಿತ್ತು.

ಮೆರವಣಿಗೆಗೆ ಮಳೆ ಅಡ್ಡಿ:
ನಗರದ ಗುಂಡ್ಲುಪೇಟೆ ವೃತ್ತದ ಬಳಿ ಮೆರವಣಿಗೆ ತಲುಪಿದಾಗ ಸುಮಾರು 20 ನಿಮಿಷಗಳ ಕಾಲ ಸುರಿದ ಜೋರು ಮಳೆಯಿಂದ ಮೆರವಣಿಗೆಗೆ ಅಡ್ಡಿಯಾಯಿತು. ಈ ವೇಳೆ ಮಳೆಯ ನಡುವೆಯೂ ಯುವಕರು ಕುಣಿದು ಕುಪ್ಪಳಿಸಿದರು. ಕೆಲಕಾಲ ಅಲ್ಲಿಂದ ಮುಂದೇ ಹೋಗದೆ ಅಲ್ಲೇ ಕುಣಿಯುತ್ತಿದ್ದ ಯುವಕರನ್ನು ಮುಂದೆ ಕಳುಹಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ವೇಳೆ ಪೊಲೀಸರು ಕೂಡ ಮಳೆಯಲ್ಲಿ ಒದ್ದೆಯಾದರು. ಬಳಿಕ ತುಂತುರು ಮಳೆಯಲ್ಲೇ ಮೆರವಣಿಗೆ ಮುಂದೆ ಸಾಗಿತು.

ಮಜ್ಜಿಗೆ, ವಾಟರ್‌ಬಾಟಲ್ ವಿತರಣೆ:
ಶ್ರೀಅಯೋಧ್ಯೆ ಗಣಪತಿ ವಿಸರ್ಜನಾ ಮೆರವಣಿಗೆ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಗೆ ತಲುಪಿದಾಗ ಉದ್ಯಮಿ ಶ್ರೀನಿಧಿ ಕುದರ್ ಹಾಗೂ ದಿಲೀಪ್ ಕುದರ್ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ನೆರೆದಿದ್ದ ಜನರಿಗೆ ಮಜ್ಜಿಗೆ, ವಾಟರ್ ಬಾಟಲ್‌ಗಳನ್ನು ವಿತರಣೆ ಮಾಡಲಾಯಿತು. ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಪೊಲೀಸರು, ಜಾನಪದ ಕಲಾತಂಡಗಳು ಹಾಗೂ ಯುವಕರು ಮಜ್ಜಿಗೆ, ನೀರು, ಬಾಳೆಹಣ್ಣು, ಬಿಸ್ಕೇಟ್ ಸೇವಿಸಿ ಸಮಾಧಾನ ಪಟ್ಟುಕೊಂಡರು. ಈ ವೇಳೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಲಾತಂಡಗಳಿಗೆ ಮಂಡಳಿಯ ವತಿಯಿಂದ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net