ನಾಮಲಕ ಅಳವಡಿಸದಿದ್ದರೆ ಹೋರಾಟ

Published on

ಚಾಮರಾಜನಗರ: ವಿವಿಧ ಗ್ರಾಮಗಳಲ್ಲಿ ಅಳವಡಿಸಿದ್ದ ರೈತ ಸಂಘದ ನಾಮಲಕಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿದ್ದು, ಕೂಡಲೇ ನಾಮಲಕ ಅಳವಡಿಸದಿದ್ದರೇ ಹೋರಾಟ ರೂಪಿಸಲಾಗುವುದು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎ.ಎಂ.ಮಹೇಶ್ ಪ್ರಭು ಎಚ್ಚರಿಸಿದರು.

ಹನೂರು ತಾಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪುದುಕಾಡು, ಅಪ್ಪುಪಟ್ಟಿ ಗ್ರಾಮಗಳಲ್ಲಿ ರೈತ ಸಂಘದ ನಾಮಲಕಗಳನ್ನು ಅಳವಡಿಸಲಾಗಿತ್ತು. ಆದರೇ ಅರಣ್ಯ ಇಲಾಖೆ ರೈತಸಂಘದ ನಾಮಲಕಗಳನ್ನು ತೆರವುಗೊಳಿಸುವ ಮೂಲಕ ರೈತರ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ತಕ್ಷಣವೇ ನಾಮಲಕವನ್ನು ಅಳವಡಿಸಬೇಕು, ಇಲ್ಲವಾದರೇ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೊಳ್ಳೇಗಾಲ ತಾಲೂಕಿನ ಜಾಗೇರಿ ಗ್ರಾಮದಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಯ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡುವ ಭರವಸೆ ನೀಡಲಾಗಿತ್ತು. ಆದರೆ ಈ ಭರವಸೆ ಇನ್ನೂ ಈಡೇರಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ಇವರನ್ನು ತೆರವುಗೊಳಿಸಲು ಮುಂದಾಗಿರುವುದು ಅತ್ಯಂತ ಖಂಡನೀಯ. ಈ ಬಗ್ಗೆ ಶೀಘ್ರದಲ್ಲೇ ಹೋರಾಟ ರೂಪಿಸಲಾಗುವುದು ಎಂದರು.

ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ರೈತರ ಹಲವಾರು ಸಲು ಮಳೆಗೆ ನಾಶವಾಗಿದೆ. ಈ ಸಂಬಂಧ ಸೂಕ್ತ ಬೆಳೆ ಪರಿಹಾರವನ್ನು ನೀಡಬೇಕು. ಎಲ್ಲ ಬೆಳೆಗಳಿಗೂ ಫಸಲ್ ಬಿಮಾ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ಗೋಪಿನಾಥಂ ವ್ಯಾಪ್ತಿಗೆ ಸೇರಿದ 8 ಗ್ರಾಮಗಳಾದ ಕೋಟೆಯೂರು, ಆತೂರು, ಪೂಗೋಂಬು, ತೇಗೋಂಬು, ಅಪ್ಪುಗಾಂಪಟ್ಟಿ, ಜಂಬುರಟ್ಟಿಪಟ್ಟಿ, ಮಾರುಕೊಟ್ಟಾಯ್, ಆಲಂಬಾಡಿ ಗ್ರಾಮಗಳಲ್ಲಿ ಜನರು ವ್ಯವಸಾಯವನ್ನು ಬಿಟ್ಟರೆ ಜೀವನ ಮಾಡಲು ಬೇರೆ ದಾರಿ ಯಾವುದು ಇಲ್ಲ. ಇಂದಿಗೂ ಕೆಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ರೈತರಿಗೆ ಕೂಡಲೇ ಕೃಷಿ ಸಾಗುವಳಿ ಪತ್ರ ಮತ್ತು ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.

ಸಂಘದ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ಕೊಳ್ಳೇಗಾಲ ಉಪವಿಭಾಗ ವ್ಯಾಪ್ತಿಯ ಕೊಳ್ಳೇಗಾಲ, ಯಳಂದೂರು, ಹನೂರು ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್‌ನಿಂದ ಫಸಲು ನಾಶವಾಗಿರುವ ಸಂಬಂಧ ಪರಿಹಾರಕ್ಕಾಗಿ 121 ರೈತರು ಅರ್ಜಿ ಸಲ್ಲಿಸಿದ್ದರು. ಆದರೆ, ಇಲಾಖೆಯಿಂದ 8 ರೈತರಿಗೆ ಮಾತ್ರ ಪರಿಹಾರ ನೀಡಿದೆ. ಈ ಸಂಬಂಧ ಇಲಾಖೆಯ ಅಧಿಕಾರಿಗಳು ಮರು ಪರಿಶೀಲಿಸಿ ಬೆಳೆ ನಷ್ಟ ಪರಿಹಾರವನ್ನು ನೀಡಬೇಕು ಎಂದರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಹನೂರು ತಾಲೂಕು ಅಧ್ಯಕ್ಷ ಅಮ್ಮದ್‌ಖಾನ್, ಹೆಬ್ಬಸೂರು ಬಸವಣ್ಣ, ಸಿದ್ದರಾಜು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net