ಚಾಮರಾಜನಗರ: ಜಿಲ್ಲಾಡಳಿತದ ವತಿಯಿಂದ ಅ.17 ರಂದು ಶ್ರೀಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಗುದ್ದಲಿ ಪೂಜೆ ನೆರವೇರದಿದ್ದರೆ, ಸಮುದಾಯದಿಂದಲೇ ಗುದ್ದಲಿ ಪೂಜೆ ನಡೆಸಲಾಗುವುದು ಎಂದು ನಾಯಕ ಸಮುದಾಯ ಮುಖಂಡ ಪು.ಶ್ರೀನಿವಾಸ ನಾಯಕ ಹೇಳಿದರು.
ಕಳೆದ 10 ವರ್ಷಗಳಿಂದಲೂ ಜಿಲ್ಲಾಡಳಿತ ಭವನದ ಮುಂಭಾಗ ಶ್ರೀವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಸಮುದಾಯದವರು ಒತ್ತಾಯಿಸುತ್ತಿದ್ದೇವೆ. ಆದರೆ ಜಿಲ್ಲಾಡಳಿತ, ಸರ್ಕಾರದ ಗಮನಕ್ಕೆ ತಂದು ಪುತ್ಥಳಿ ನಿರ್ಮಾಣಕ್ಕೆ ಸ್ಥಳ ನಿಯೋಜಿಸುವುದಾಗಿ ತಿಳಿಸಿದ್ದು, ಇಲ್ಲಿಯವರೆಗೆ ಯಾವುದೇ ಕ್ರಮವಹಿಸಿಲ್ಲ. ಜಿಲ್ಲಾಡಳಿತದಿಂದ ಪುತ್ಥಳಿ ನಿರ್ಮಾಣಕ್ಕೆ ಕ್ರಮವಹಿಸದಿದ್ದರೇ, ನಾಯಕ ಸಮುದಾಯದವರೇ ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದು ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಜಿಲ್ಲೆಯ ಎಲ್ಲ ತಾಲೂಕುಗಳಿಂದಲೂ ನಾಯಕ ಸಮುದಾಯದವರು ಅ.17 ರಂದು ನಗರದ ಪ್ರವಾಸಿಮಂದಿರದಲ್ಲಿ ಸೇರಿ ಅಲ್ಲಿಂದ ಮೆರವಣಿಗೆಯಲ್ಲಿ ತೆರಳಿ, ತಾಲೂಕು ಕಚೇರಿ ಬಳಿ ಇರುವ ನಾಯಕ ಜನಾಂಗದ ವಿದ್ಯಾರ್ಥಿನಿಲಯದಲ್ಲಿ ಸಭೆ ನಡೆಸಲಾಗುವುದು. ಬಳಿಕ ಜನಾಂಗದವರೆಲ್ಲ ಜಿಲ್ಲಾಡಳಿತ ಭವನಕ್ಕೆ ತೆರಳಿ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುತ್ತೇವೆ. ಇದಕ್ಕೆ ಏನೇ ಆದರೂ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದರು.
ಗೋಷ್ಠಿಯಲ್ಲಿ ನಾಯಕ ಸಮುದಾಯದ ಮುಖಂಡ ಜಯಸುಂದರ್, ಶಿವರಾಜು, ಸುರೇಶ್ ನಾಯಕ, ವೆಂಕಟರಮಣ ನಾಯಕ, ಸೋಮನಾಯಕ ಉಪಸ್ಥಿತರಿದ್ದರು.