ಕಳೆಗಟ್ಟುತ್ತಿದೆ ಚಾಮರಾಜನಗರ ದಸರಾ

05rajesh8
Published on

ಚಾಮರಾಜನಗರ: ಮನೆ-ಮಕ್ಕಳ ಜವಾಬ್ದಾರಿ, ಅಂಗನವಾಡಿ ಕೆಲಸದ ಒತ್ತಡವನ್ನು ಮರೆತು ಹಲವಾರು ಕ್ರೀಡೆಗಳಲ್ಲಿ ಮಹಿಳೆಯರು ಸಂತಸದಿಂದ ಪಾಲ್ಗೊಂಡಿದ್ದರು. ಒಲೆ ರಹಿತ ಅಡುಗೆ ಸ್ಪರ್ಧೆಯಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸಿ ನೆರೆದವರ ಬಾಯಿಯಲ್ಲಿ ನೀರೂರುವಂತೆ ಮಾಡಿದರು.

ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಇಲಾಖೆಯ ವತಿಯಿಂದ ಮಹಿಳಾ ದಸರಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಅಂಗನವಾಡಿ ಕಾರ್ಯಕರ್ತರಿಗೆ ಆಯೋಜಿಸಿದ್ದ ಮಹಿಳಾ ಕ್ರೀಡಾಕೂಟ ಮತ್ತು ಒಲೆ ರಹಿತ ಅಡುಗೆ ಸ್ಪರ್ಧೆಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ಸಂಭ್ರಮಿಸಿದರು.

ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಅ.7 ರಂದು ಮಹಿಳಾ ದಸರಾವನ್ನು ಆಯೋಜನೆ ಮಾಡಲಾಗಿದೆ. ಅದರಂತೆ ಪೂರ್ವಭಾವಿಯಾಗಿ ಅಂಗನವಾಡಿ ಕಾರ್ಯಕರ್ತರು, ಸಹಾಯಕರು ಹಾಗೂ ವಿವಿಧ ಸ್ವ-ಸಹಾಯ ಸಂಘಗಳ ಪ್ರತಿನಿಧಿಗಳಿಗೆ ಮ್ಯೂಸಿಕಲ್ ಚೇರ್, ಬಕೆಟ್ ಇನ್‌ದಿ ಬಾಲ್, ಮಡಿಕೆ ಹೊಡೆಯುವ ಸ್ಪರ್ಧೆ ಹಾಗೂ ಲೆಮನ್ ಅಂಡ್ ಸ್ಪೂನ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅಂಗನವಾಡಿ ಕಾರ್ಯಕರ್ತರು ಈ ಸರ್ಧೆಗಳಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅ.7 ರಂದು ನಡೆಯಲಿರುವ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಣೆ ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮೋನಾರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಂಜುನಾಥ್ ಹಾಗೂ ಇನ್ನಿತರೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net