ಗ್ರಾಮೀಣ ಸೊಗಡಿನ ಚಿತ್ರಗಳಿಗೆ ಹರಿದುಬಂದ ಪ್ರೇಕ್ಷಕರು

07rajesh10
Published on

ಚಾಮರಾಜನಗರ: ದಸರಾ ಮಹೋತ್ಸವದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾದ ಗ್ರಾಮೀಣ ಸೊಗಡಿನ ಚಲನಚಿತ್ರಗಳನ್ನು ನೋಡಲು ಪ್ರೇಕ್ಷಕರು ಚಿತ್ರಮಂದಿರಗಳತ್ತ ಹರಿದುಬಂದರು.

ನಗರದ ಶ್ರೀಬಸವೇಶ್ವರ ಚಿತ್ರಮಂದಿರದಲ್ಲಿ ಬೆಳಿಗ್ಗೆ 10 ಗಂಟೆಗೆ ಆಯೋಜಿಸಿದ್ದ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿರುವ ಕೋಳಿ ಎಸ್ರು ಸಿನಿಮಾ ಪ್ರದರ್ಶನವನ್ನು ವೀಕ್ಷಿಸಲು ಸಾಕಷ್ಟು ಜನರು ಬಂದಿದ್ದರು. ಸಂಪೂರ್ಣ ಚಾಮರಾಜನಗರ ಭಾಷಾ ಸೊಗಡನಲ್ಲಿ ಮೂಡಿಬಂದಿರುವ ಚಿತ್ರವನ್ನು ವೀಕ್ಷಣೆ ಮಾಡಲು ಹಲವಾರು ಚಿತ್ರರಸಿಕರು ಹಾಗೂ ನೂರಾರು ಮಕ್ಕಳು ಆಗಮಿಸಿದ್ದರು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಅವರು ಕೋಳಿ ಎಸ್ರು ಸಿನಿಮಾವನ್ನು ವೀಕ್ಷಣೆ ಮಾಡಿದರು. ಬಳಿಕ ಚಿತ್ರದ ನಿರ್ದೇಶಕರು ಹಾಗೂ ಚಿತ್ರತಂಡದವರಿಗೆ ಗೌರವ ಸಮರ್ಪಣೆ ಮಾಡಿದರು. ಸಂಜೆ 4 ಗಂಟೆಗೆ ಶಾಖಾಹಾರಿ ಸಿನಿಮಾ ಪ್ರದರ್ಶನವಾಯಿತು.

ಸಂಜೆ ವೇಳೆಯಲ್ಲಿ ಸಿಂಹ ಮೂವಿ ಪ್ಯಾರಡೈಸ್ ಚಿತ್ರಮಂದಿರಲ್ಲಿ ಬೆಳಿಗ್ಗೆ 10 ಗಂಟೆಗೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಸ್ವಾತಿಮುತ್ತಿನ ಮಳೆ ಹನಿಯೇ ಸಿನಿಮಾವನ್ನು ಪ್ರದರ್ಶನ ಮಾಡಲಾಯಿತು. ಬಳಿಕ 4 ಗಂಟೆಗೆ ಪ್ರದರ್ಶನಗೊಂಡ ಮತ್ತೊಂದು ಗ್ರಾಮೀಣ ಸೊಗಡಿನ ಸಿನಿಮಾ ‘ಅನ್ನ’ ಸಿನಿಮಾವನ್ನು ವೀಕ್ಷಣೆ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ಚಿತ್ರರಸಿಕರು ಆಗಮಿಸಿದರು. ಚಲನಚಿತ್ರ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದ ಸುನೀಲ್ ಬೋಸ್, ಶಾಸಕ ಪುಟ್ಟರಂಗಶೆಟ್ಟಿ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಜಿಲ್ಲಾ ಪಂಚಾಯಿತಿ ಸಿಇಓ ಮೋನಾರೋತ್ ಹಾಗೂ ಇತರರು ಅನ್ನ ಸಿನಿಮಾವನ್ನು ವೀಕ್ಷಣೆ ಮಾಡುವುದರ ಮೂಲಕ ಪ್ರೋತ್ಸಾಹಿಸಿದರು.

ಅದಲ್ಲದೇ ನಗರದ ಭ್ರಮರಾಂಭ ಚಿತ್ರ ಮಂದಿರದಲ್ಲಿ ಸತ್ಯಹರಿಶ್ಚಂದ್ರ ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಪ್ರದರ್ಶನವಾಯಿತು. ಸಿದ್ಧಾರ್ಥ ಚಿತ್ರಮಂದಿರದಲ್ಲಿ ಚಿರತೆ ಬಂತು ಚಿರತೆ ಮತ್ತು ಶಾಲಿವಾಹನ ಶಕೆ, ಗುರು ರಾಘವೇಂದ್ರ ಚಿತ್ರಮಂದಿರದಲ್ಲಿ ಗೋಸ್ಟ್ ಹಾಗೂ ಪುನೀತ್ ರಾಜ್ ಕುಮಾರ್ ಅಭಿನಯದ ಗಂಧದಗುಡಿ ಸಿನಿಮಾ ಪ್ರದರ್ಶನಕಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net