ಹೂಗಳಲ್ಲಿ ಅರಳಿದ ಹಲವು ಕಲಾಕೃತಿಗಳು

07rajesh13
Published on

ಚಾಮರಾಜನಗರ: ಸಾವಿರಾರು ಹೂಗಳ ರಾಶಿಯಲ್ಲಿ ಮೂಡಿದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೇವಾಲಯ, ಮರಳಿನಲ್ಲಿ ಅರಳಿದ ನೇಗಿಲ ಯೋಗಿ, ವಿವಿಧ ಬಗೆಯ ಹಣ್ಣುಗಳಲ್ಲಿ ರಚಿಸಿದ್ದ ಕಲಾಕೃತಿಗಳು ಗಮನ ಸೆಳೆಯಿತು.

ನಗರದ ಜಿಲ್ಲಾಡಳಿತ ಭವನದ ಮುಂಭಾಗದ ಉದ್ಯಾನವನದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ಪಶು ಸಂಗೋಪನೆ, ರೇಷ್ಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಇನ್ನಿತರೆ ಗಣ್ಯರು ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು. ಬಳಿಕ ಆಗಮಿಸಿದ ಸಾರ್ವಜನಿಕರು, ಸಾವಿರಾರು ಹೂಗಳು, ಹಣ್ಣು ಮತ್ತು ಇನ್ನಿತರೆ ವಸ್ತುಗಳಿಂದ ಮೂಡಿಬಂದಿರುವ ಕಲಾಕೃತಿಗಳನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಆಗಮಿಸಿದರು.

ಹಿರಿಯರು-ಕಿರಿಯರು, ಯುವಕ-ಯುವತಿಯರು, ವಿದ್ಯಾರ್ಥಿಗಳು ಫಲಪುಷ್ಪ ಪ್ರದರ್ಶನದಲ್ಲಿ ಮೂಡಿರುವ ಕಲಾಕೃತಿಗಳನ್ನು ನೋಡಿ ಸಂಭ್ರಮಿಸಿದರು. ವಿವಿಧ ಕಲಾಕೃತಿಗಳ ಮುಂದೆ ನಿಂತು ಪೋಟೋ ತೆಗೆಸಿಕೊಂಡು ಖುಷಿಪಟ್ಟರು. ಹಲವಾರು ಸೆಲ್ಫಿ ಪಾಯಿಂಟ್‌ಗಳಲ್ಲಿ ನಿಂತು ಕುಟುಂಬ ಸಮೇತರಾಗಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಸಮೀಪದಲ್ಲೇ ಸಾವಯವ ಮಾದರಿಯಲ್ಲಿ ಹಲವಾರು ರೈತರು ತಯಾರಿಸಿದ್ದ, ತಿಂಡಿ-ತಿನಿಸುಗಳನ್ನು ಸವಿದು ಹರ್ಷಗೊಂಡರು. ವಿವಿಧ ಇಲಾಖೆಗಳಿಂದ ಮಾಡಿದ್ದ, ಮಾದರಿಗಳನ್ನು ವೀಕ್ಷಣೆ ಮಾಡುವುದರಮೂಲಕ ಮಾಹಿತಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net