ವಾಣಿಜ್ಯ ಮಳಿಗೆಗಳಲ್ಲಿ ಸರಣಿ ಕಳ್ಳತನ

Crime Logo
Published on

ಚಾಮರಾಜನಗರ : ಒಂದೆಡೆ ಅಂಗಡಿಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾಗಳನ್ನು ತೆಗೆದು ಹಾಕುವಂತೆ ಅನಾಮಧೇಯ ಬೆದರಿಕೆ ಪತ್ರಗಳು ಬಂದಿದ್ದರೆ, ಇದರ ಬೆನ್ನಲ್ಲೇ ಮತ್ತೊಂದೆಡೆ ಬುಧವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ.

ನಗರದ ಚಿನ್ನದ ಅಂಗಡಿ ಮತ್ತು ಬಟ್ಟೆ ಅಂಗಡಿಗಳ ಮಾಲೀಕರಾಗಿರುವ ಎಂ.ಕೆ. ಸುಬ್ರಮಣ್ಯ, ಎಂ.ಕೆ.ಶ್ರೀನಿವಾಸ ಹಾಗೂ ವಾಸುಕಿ ಎಂಬುವವರಿಗೆ ‘ನಿಮ್ಮ ಅಂಗಡಿಗಳ ಮುಂದೆ ಇರುವ ಸಿಸಿ ಕ್ಯಾಮರಾ ತೆಗೆಸಿ, ಇಲ್ಲದಿದ್ದರೇ ತಕ್ಕ ಪಾಠ ಕಲಿಸುತ್ತೇವೆ’ ಎಂದು ಡೇಂಜರ್ ಸಿಂಬಲ್ನೊಂದಿಗೆ ಬೆದರಿಕೆ ಪತ್ರ ಬರೆದು ಅಂಚೆ ಮೂಲಕ ಅನಾಮಧೇಯ ಪತ್ರವನ್ನು ಕಳುಹಿಸಿದ್ದರು. ಈ ಮೂವರು ಮಾಲೀಕರ ಹೆಸರು ಬರೆದು ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಅನಾಮಧೇಯ ಅಸಾಮಿಗಳ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಇದರ ಬೆನ್ನಲ್ಲೇ ಬುಧವಾರ ರಾತ್ರಿ 3 ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿದ್ದು, ಬೆಳಂಬೆಳಗ್ಗೆ ವ್ಯಾಪಾರಿಗಳು ಬೆಚ್ಚಿಬಿದ್ದಿದ್ದಾರೆ.

ನಗರದ ಶ್ರೀಭುವನೇಶ್ವರಿ ವೃತ್ತದ ಸಮೀಪದಲ್ಲಿರುವ ಸ್ವಾಗತ್ ಟ್ರೇಡರ್ಸ್, ಪ್ರಭು ಎಲೆಕ್ಟ್ರಿಕಲ್, ವಿನಯ್ ಆಟೋಮೊಬೈಲ್ ವಾಣಿಜ್ಯ ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ವ್ಯಾಪಾರಸ್ಥರು, ಉದ್ಯಮಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಕಳ್ಳರು ಅಂಗಡಿಗಳ ಗ್ಲಾಸ್‌ಗಳನ್ನು ಒಡೆದು ಹಾಕಿ, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹಾಗೂ ಹಣವನ್ನು ಎಗರಿಸಿದ್ದಾರೆ. ಅದಲ್ಲದೇ ಏಣಿಗಳನ್ನು ಬಳಕೆ ಮಾಡಿಕೊಂಡು, ಅಂಗಡಿಗಳಲ್ಲಿ ಅಳವಡಿಸಿದ್ದ ಸಿಸಿಟಿವಿಗಳನ್ನು ಜಖಂಗೊಳಿಸಿದ್ದಾರೆ. ಸರಣಿ ಕಳ್ಳತನ ನಡೆದಿರುವ ಸ್ಥಳಗಳಿಗೆ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಮರುಕಳಿಸುತ್ತಲೇ ಇದೇ ಸರಣಿ ಕಳ್ಳತನ:
ಜಿಲ್ಲೆಯಲ್ಲಿ ಇತ್ತೀಚೆಗೆ ಸರಣಿ ಕಳ್ಳತನಗಳು ಮರುಕಳಿಸುತ್ತಲೇ ಇದ್ದು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಭಯಭೀತರಾಗಿದ್ದಾರೆ. ಇತ್ತೀಚೆಗೆ ಹನೂರಿನಲ್ಲಿ ವ್ಯಕ್ತಿಯೊಬ್ಬರು ತಮ್ಮ ಮಕ್ಕಳ ಮದುವೆಗಾಗಿ ಮನೆಯಲ್ಲಿ ಕೂಡಿಟ್ಟಿದ್ದ ಹಣವನ್ನು ಕಳ್ಳರು ಕದ್ದೋಯ್ದಿದ್ದರು. ಅದರ ಬೆನ್ನಲ್ಲೇ ಹನೂರು ತಾಲೂಕಿನಲ್ಲಿ ಹಾಡಹಗಲೇ ವೃದ್ಧನ ಕೈ-ಕಾಲುಗಳನ್ನು ಕಟ್ಟಿ ಆತನಿಂದ ಖದೀಮರು ಹಣ ದೋಚಿದ್ದರು. ಚಾಮರಾಜನಗರ ತಾಲೂಕಿನ ಚಂದಕವಾಡಿ ಗ್ರಾಮದಲ್ಲಿರುವ ವಾಣಿಜ್ಯ ಮಳಿಗೆಗಳಲ್ಲಿ ಖದೀಮರು ಸರಣಿ ಕಳ್ಳತನ ಮಾಡಿದ್ದರು. ಈ ಪ್ರಕರಣಗಳು ಮಾಸುವ ಮುನ್ನವೇ ಜಿಲ್ಲಾ ಕೇಂದ್ರದಲ್ಲಿ ಸರಣಿ ಕಳ್ಳತನ ನಡೆದಿದೆ. ಅದಲ್ಲದೇ ಮಾಲೀಕರ ಹೆಸರಿನಲ್ಲಿ ಅನಾಮಧೇಯ ಪತ್ರಗಳನ್ನು ಬರೆಯುವ ಹೊಸ ತಂತ್ರಗಳನ್ನು ಕಳ್ಳರು ಕಂಡುಕೊಂಡಿದ್ದು, ಈ ಕುರಿತು ಪೊಲೀಸ್ ಇಲಾಖೆ ಹೆಚ್ಚು ಜಾಗೃತವಾಗಬೇಕಿದೆ. ಈ ಖದೀಮರನ್ನು ಆದಷ್ಟು ಬೇಗ ಬಂಧಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net