ರಾಜೀನಾಮೆ ಒತ್ತಾಯಕ್ಕೆ ಪ್ರತ್ಯುತ್ತರ

Published on

ಚಾಮರಾಜನಗರ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಹಗರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿರುವ ವಿರೋಧ ಪಕ್ಷಗಳ ಏಟಿಗೆ ಜಿಲ್ಲೆಯ ಶಾಸಕರು ಅದನ್ನೇ ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎ್ಐಆರ್ ದಾಖಲಾಗಿರುವ ಬೆನ್ನಲ್ಲೇ ರಾಜೀನಾಮೆ ವಿಚಾರದಲ್ಲಿ ಪರ-ವಿರೋಧ ವ್ಯಕ್ತವಾಗುತ್ತಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಬಿಜೆಪಿ-ಜೆಡಿಎಸ್ ನಾಯಕರು ಒತ್ತಾಯ ಮಾಡುತ್ತಿದ್ದಾರೆ. ಇದಕ್ಕೆ ತಿರಗೇಟು ನೀಡಿರುವ ಕಾಂಗ್ರೆಸ್‌ಗೆ ಈಗ ‘ಚುನಾವಣಾ ಬಾಂಡ್’ ಸಂಬಂಧ ಕೇಂದ್ರ ಹಣಕಾಸು ಸಚಿವೆ ಸೇರಿ ಐವರ ವಿರುದ್ಧ ಎ್ಐಆರ್ ದಾಖಲಾಗಿರುವ ಸರಕು ಸಿಕ್ಕಿದೆ.

ರಾಜೀನಾಮೆ ಕೇಳುವ ನೈತಿಕತೆ ಇಲ್ಲ: ಸಿದ್ದರಾಮಯ್ಯ ಯಾಕೆ ರಾಜೀನಾಮೆ ನೀಡಬೇಕು. ತಮ್ಮ ವಿರುದ್ಧ ಎ್ಐಆರ್ ಆದವರೆಲ್ಲಾ ರಾಜೀನಾಮೆ ನೀಡಿದ್ದಾರಾ ಎಂದು ಎಂಎಸ್‌ಐಎಲ್ ಅಧ್ಯಕ್ಷರೂ ಆಗಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ ಪ್ರಶ್ನಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ರಾಜೀನಾಮೆ ನೀಡಬೇಕಿತ್ತಲ್ಲವೇ ಎಂದು ಮರು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಕೇಳುವ ಇವರಿಗೆ ನೈತಿಕತೆ ಇದೆಯೇ, ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ನೇರವಾಗಿ ಎಲ್ಲೂ ಭಾಗಿಯಾಗಿಲ್ಲ. ಕೇಂದ್ರ ಸರ್ಕಾರ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಸ್ತಕ್ಷೇಪ ಮಾಡಿ ಇಡಿ, ಐಟಿ, ಸಿಬಿಐಯನ್ನು ಬಳಸಿಕೊಂಡು ಕಿರುಕುಳ ನೀಡುವುದನ್ನು ಕಲಿತಿದೆಯೇ ವಿನಃ ಅಭಿವೃದ್ಧಿ ಮಾಡುವುದನ್ನು ಕಲಿತಿಲ್ಲ ಎಂದಿದ್ದಾರೆ.

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಈ ವಿಚಾರದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಉತ್ತರ ನೀಡಿದ್ದಾರೆ. ಅವರ ಹೇಳಿಕೆಯೇ ನನ್ನ ಹೇಳಿಕೆ. ಎ್ಐಆರ್ ಆಗಿರುವ ಕೇಂದ್ರ ಸಚಿವರಾದ ನಿರ್ಮಲಾ ಸೀತಾಮರಾಮನ್, ಎಚ್.ಡಿ.ಕುಮಾರಸ್ವಾಮಿ ಅವರೂ ರಾಜೀನಾಮೆ ಕೊಡಬೇಕಲ್ಲವಾ..?, ಒಬ್ಬರಿಗೆ ಒಂದು ನ್ಯಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕಳಂಕ ರಹಿತರಾಗಿ ಬರ್ತಾರೆ: ಸಿದ್ದರಾಮಯ್ಯ ಅವರು ಯಾವುದೇ ಕಳಂಕವಿಲ್ಲದ ಶುದ್ಧ ಇತಿಹಾಸ ಹೊಂದಿರುವ ಜನಪರ ನಾಯಕ. ಅವರ ಜನಪ್ರಿಯತೆಯನ್ನು ಸಹಿಸದೆ ಬಿಜೆಪಿ ಷಡ್ಯಂತ್ರ ಮಾಡಿ ಸುಳ್ಳು ಪ್ರಕರಣ ದಾಖಲಿಸುವಂತೆ ಮಾಡಿದೆ. ಇದರ ಬಗ್ಗೆ ಜನತೆಗೆ ಅರಿವಿದ್ದು, ಲೋಕಾಯುಕ್ತ ತನಿಖೆಯಲ್ಲಿ ಸತ್ಯಾಂಶ ಹೊರಬಂದು ಸಿದ್ದರಾಮಯ್ಯ ಕಳಂಕ ರಹಿತರಾಗಿ ಹೊರಬರಲಿದ್ದಾರೆ ಎಂದಿದ್ದಾರೆ.

ಚಾಮರಾಜನಗರ ಕಾಂಗ್ರೆಸ್ ಭದ್ರಕೋಟೆ:
ಚಾಮರಾಜನಗರ ಜಿಲ್ಲೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ‘ಕೈ’ ಶಾಸಕರಿದ್ದಾರೆ. ಸಂಸದರೂ ಕಾಂಗ್ರೆಸ್‌ನವರೇ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಚಾಮರಾಜನಗರ ಬಲದ ಮೂಲವಾಗಿದೆ. ಸಿದ್ದರಾಮಯ್ಯಗೆ ಬಹಳ ಕಾಲದಿಂದಲೂ ಜಿಲ್ಲೆಯ ಜನರು ಮತ್ತು ಜನಪ್ರತಿನಿಧಿಗಳೊಂದಿಗೆ ಉತ್ತಮ ನಂಟಿದೆ.
ಚಾಮರಾನಗರ ವಿಧಾನಸಭಾ ಕ್ಷೇತ್ರದಲ್ಲಿ ಸತತ 4 ಬಾರಿ ಗೆದ್ದಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತ. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಸಿಎಂ ಸಿದ್ದರಾಮಯ್ಯ ಅವರ ಗುರು ದಿ.ಬಿ.ರಾಚಯ್ಯ ಅವರ ಪುತ್ರ. ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಕೂಡ ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಆಪ್ತ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್‌ಬೋಸ್ ಸಂಸದರಾಗಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್‌ಗೆ ಪ್ರತಿಯಾಗಿ ಅವರದೇ ಪಕ್ಷದಲ್ಲಿ ಎ್ಐಆರ್ ಆಗಿರುವ ನಾಯಕರ ರಾಜೀನಾಮೆಯನ್ನು ಕೇಳಿ ತಿರುಗೇಟು ನೀಡಿದ್ದಾರೆ.

ಅಧಿಕಾರಿಗಳಿಗೆ ಜಿಲ್ಲೆ ನಂಟು..
ಮುಡಾ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳಲ್ಲಿ ಇಬ್ಬರಿಗೆ ಜಿಲ್ಲೆಯ ನಂಟು ಇದೆ. ಮೈಸೂರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್ ಅವರು ಈ ಹಿಂದೆ ಚಾಮರಾಜನಗರದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇಲ್ಲಿಂದ ಅಲ್ಲಿಗೆ ಕಳೆದ ತಿಂಗಳು ವರ್ಗಾವಣೆಗೊಂಡರು. ಇವರು ಮುಖ್ಯಮಂತ್ರಿಗಳ ವಿರುದ್ಧದ ಹೈ ಪ್ರೊೈಲ್ ಕೇಸ್‌ನ ತನಿಖೆಯ ಹೊಣೆ ಹೊತ್ತಿದ್ದಾರೆ. ಈ ಪ್ರಕರಣದ ತನಿಖೆಗಾಗಿ ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ರಚನೆ ಮಾಡಿರುವ 4 ತನಿಖಾ ತಂಡಗಳಲ್ಲಿ ಚಾಮರಾಜನಗರ ಲೋಕಾಯುಕ್ತದ ಡಿವೈಎಸ್‌ಪಿ ಮ್ಯಾಥ್ಯು ಥಾಮಸ್ ಒಂದು ತಂಡದ ನೇತೃತ್ವ ವಹಿಸಿದ್ದಾರೆ.

ಕಾನೂನು ಕ್ರಮವಾಗಲಿ:
ಮುಡಾ ಹಗರಣದ ವಿಚಾರದಲ್ಲಿ ಕಾನೂನು ಪ್ರಕಾರ ಕ್ರಮವಾಗಲಿ. ಮುಖ್ಯಮಂತ್ರಿಯಾದವರ ವಿರುದ್ಧ ಆರೋಪ ಕೇಳಿಬಂದಾಗ ರಾಜೀನಾಮೆ ನೀಡುವ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರ ಬಗ್ಗೆ ನಾನೇನೂ ಮಾತನಾಡಲ್ಲ. ಒಟ್ಟಾರೆಯಗಿ ಕಾನೂನು ಪ್ರಕಾರವೇ ಕ್ರಮವಾಗಬೇಕು ಎಂದು ಹನೂರು ಶಾಸಕ ಎಂ.ಆರ್.ಮಂಜುನಾಥ್ ಅಭಿಪ್ರಾಯ ನೀಡಿದ್ದಾರೆ.

ಚುನಾವಣೆ ಬಾಂಡ್ ಬಗ್ಗೆ ಕಾಂಗ್ರೆಸ್‌ನವರು ಮಾತನಾಡಲಿ. ಎಷ್ಟೇ ದೊಡ್ಡವರಾದರೂ ಕೋರ್ಟ್ ಹೇಳಿದ್ದನ್ನು ಪಾಲನೆ ಮಾಡಲೇಬೇಕು. ಹಾಗಂತ ಇನ್ನೊಂದು ತಪ್ಪು ತೋರಿಸಿ ತನ್ನ ತಪ್ಪನ್ನು ಮುಚ್ಚಿಡಲು ಸಾಧ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ಹಗರಣದಲ್ಲಿ ತನಿಖೆ ಎದುರಿಸಬೇಕಾಗಿರುವುದು ಅನಿವಾರ್ಯ. ಅಧಿಕಾರದಲ್ಲಿ ಇದ್ದುಕೊಂಡು ತನಿಖೆ ಎದುರಿಸಲು ಸಾಧ್ಯವಿಲ್ಲ. ಆವತ್ತು ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕಾದರೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯ ಹೇಳುತ್ತಿದ್ದರು. ಇವತ್ತು ಅದೇ ಮಾತಿನಂತೆ ಸಿದ್ದರಾಮಯ್ಯ ನಡೆದುಕೊಳ್ಳಬೇಕು.ಸಿ.ಎಸ್.ನಿರಂಜನ್‌ಕುಮಾರ್, ಜಿಲ್ಲಾಧ್ಯಕ್ಷ, ಬಿಜೆಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net