ಧರ್ಮ ಸಂಸ್ಕಾರದಿಂದ ಸಂತೋಷ

29rajesh2
Published on

ಚಾಮರಾಜನಗರ: ಧರ್ಮ ಸಂಸ್ಕಾರ ನಮ್ಮಲ್ಲಿ ಪ್ರೀತಿ, ವಿಶ್ವಾಸ, ಪರಿಶುದ್ಧತೆಯನ್ನು ಬೆಳೆಸುತ್ತದೆ ಎಂದು ಮೂಡುಗೂರು ವಿರಕ್ತ ಮಠದ ಪೀಠಾಧಿಪತಿ ಶ್ರೀ ಇಮ್ಮಡಿ ಉದ್ಧಾನ ಸ್ವಾಮೀಜಿ ಹೇಳಿದರು.

ನಗರದ ರಥ ಬೀದಿಯಲ್ಲಿ ಶ್ರೀವಿದ್ಯಾಗಣಪತಿ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿರುವ ಅಯೋಧ್ಯೆ ಶ್ರೀರಾಮಚಂದ್ರಪ್ರಭು ವೇದಿಕೆಯಲ್ಲಿ ಇತ್ತೀಚಿಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮ ಸಂಸ್ಕಾರ ನಮ್ಮಲ್ಲಿ ಸಂತೋಷವನ್ನು ಉಂಟು ಮಾಡುತ್ತದೆ. ಧರ್ಮ ಸಂಸ್ಕಾರ ಪಡೆದವರು ನಡೆ, ನುಡಿ, ಆಲೋಚನೆ ಪರಿಶುದ್ಧವಾಗುತ್ತದೆ. ಮಕ್ಕಳಿಗೆ ಧರ್ಮ ಸಂಸ್ಕಾರವನ್ನು ಕಲಿಸಬೇಕು ಎಂದು ಸಲಹೆ ನೀಡಿದರು.

ಹಿಂದು ಜಾಗರಣಾ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ್ಯ ಕಾರ್ಯಕಾರಣಿ ಸದಸ್ಯ ಕೆ.ಪಿ.ಉಲ್ಲಾಸ್ ಮಾತನಾಡಿ, ಗಣೇಶೋತ್ಸವವಗಳು ಹಿಂದು ಸಮಾಜವನ್ನು ಸಂಘಟಿಸಿ ಶಕ್ತಿಯುತಗೊಳಿಸುತ್ತಿವೆ. ನಮ್ಮ ಧರ್ಮ, ಸಂಸ್ಕೃತಿ, ಸಮಾಜವನ್ನು ಬಲಿಷ್ಠಗೊಳಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.ಬಾಲ ಗಂಗಾಧರನಾಥ ತಿಲಕ್ ಅವರು ಗಣೇಶ ಮೂರ್ತಿ ಪ್ರತಿಷ್ಠಾಪನೆಯನ್ನು ಬ್ರಿಟೀಷರ ವಿರುದ್ಧ ಹೋರಾಡುವ ಸಂಘಟನೆಗಾಗಿ ಮಾಡಿದರು. ಇಂದು ದೇಶದ ಎಲ್ಲೆಡೆ ಗಣೇಶೋತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿವೆ. ಆದರೆ ಕೆಲವು ಕಿಡಿಗೇಡಿಗಳು ಗಣೇಶೋತ್ಸವ ನಿಲ್ಲಿಸಲು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಎಷ್ಟೇ ಅಡ್ಡಿಗಳು ಎದುರಾದರೂ ಗಣೇಶೋತ್ಸವ ಅದ್ಧೂರಿಯಾಗಿ ನಡೆಯಲಿದೆ ಎಂದರು.

ಇದೇ ವೇಳೆ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು. ಶ್ರೀವಿದ್ಯಾ ಗಣಪತಿ ಮಂಡಳಿ ಅಧ್ಯಕ್ಷ ಸುಂದರ್‌ರಾಜು, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಚುಡಾ ಮಾಜಿ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ, ಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾದ ವಿರಾಟ್ ಶಿವು, ಮಹೇಶ್, ಕಾರ್ಯಾಧ್ಯಕ್ಷ ಶಿವಣ್ಣ, ಉಪಾಧ್ಯಕ್ಷರಾದ ಬುಲೆಟ್ ಚಂದ್ರು, ಶಂಕರ್, ಮಣಿಕಂಠ, ಮಂಜುನಾಥಗೌಡ, ಕೂಸಣ್ಣ, ರಾಮಪ್ರಸಾದ್, ಹೇಮಂತ್, ರುದ್ರ, ಸಂತೋಷ್, ರಾಜೇಂದ್ರ, ಕೃಷ್ಣ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net