

ಚಾಮರಾಜನಗರ: ಶ್ರೀಕೃಷ್ಣನ ಆದರ್ಶಗಳು, ಚಿಂತನೆಗಳು ಭಾರತದ ಬುನಾದಿಯಾಗಿದೆ ಎಂದು ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವದ ಸಂಸ್ಥಾಪಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ತಾಲೂಕಿನ ಹರದನಹಳ್ಳಿ ಗ್ರಾಮದ ಶ್ರೀವೇಣುಗೋಪಾಲ ಸ್ವಾಮಿ ದೇವಾಲಯದ ಮುಂಭಾಗ ಶ್ರೀವಿನಾಯಕ ಭಕ್ತ ಮಂಡಳಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ, ಗೋಪೂಜೆ ರಾಧಾಕೃಷ್ಣ ಮೆರವಣಿಗೆ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವ ಉದ್ಘಾಟನೆ ಅವರು ಮಾತನಾಡಿದರು.
2010ರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವ ಶುರು ಮಾಡಲಾಯಿತು. ಪ್ರತಿ ಮನೆಯು ಭಗವಂತನ ನಾಮಸ್ಮರಣೆಯ ಮೂಲಕ ಸಕಾರಾತ್ಮಕ ಚಿಂತನೆಗಳು ಪ್ರಭಾವ ಬೀರಿ, ಮಕ್ಕಳಲ್ಲೂ ಮತ್ತು ಹಿರಿಯರಲ್ಲೂ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಶಕ್ತಿಯ ಪ್ರಭೇ ಹೆಚ್ಚಾಗಲಿ ಎಂದರು.
ಮೊಸರು ಮಡಿಕೆ ಒಡೆಯುವ ಉತ್ಸವದ ಮೊದಲು ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಗೋ ಪೂಜೆ, ರಾಧಾ-ಕೃಷ್ಣರ ವೇಷ ಧರಿಸಿದ್ದ ಮಕ್ಕಳ ಮೆರವಣಿಗೆ, ನಾದ ಸ್ವರ, ಭಜನೆ, ಮನೆಗಳಲ್ಲಿ ಆರತಿ, ಪೂಜೆ ನೆರವೇರಿಸುವ ಮೂಲಕ ವಿಜೃಂಭಣೆಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಶ್ರೀರಾಮಶೇಷ ಪಾಠ ಶಾಲೆಯ ಪ್ರಾಚಾರ್ಯ ಪ್ರದೀಪ್‌ಕುಮಾರ್ ದೀಕ್ಷಿತ್ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಮುಖ್ಯ ಶಿಕ್ಷಕ ನಟರಾಜ್, ಯೂಥ್ ಫಾರ್ ಸೇವಾ ಸಂಸ್ಥೆಯ ಮನೋಜ್, ಸಮಗ್ರ ವಿಕಾಸ ಟ್ರಸ್ಟಿನ ಸಂತೋಷ್, ಈಶ ಫೌಂಡೇಶನ್ ಸ್ವಯಂಸೇವಕ ರಘು, ವಿನಾಯಕ ಭಕ್ತ ಮಂಡಳಿಯ ಅಧ್ಯಕ್ಷ ವೆಂಕಟೇಶ್, ಗ್ರಾಮಸ್ಥರು ಇದ್ದರು.