ವೈಜ್ಞಾನಿಕ ಕೃಷಿಯಿಂದ ಬದಲಾವಣೆ ಸಾಧ್ಯ

6a403f9a-fa78-459d-a167-93909011dc16
Published on

ಚಾಮರಾಜನಗರ: ರೈತರು ಒಂದೇ ಬೆಳೆಗೆ ಸೀಮಿತರಾಗದೇ, ವಿವಿಧ ಬೆಳೆಗಳನ್ನು ಬೆಳೆಯಬೇಕು. ಈ ಮೂಲಕ ವೈಜ್ಞಾನಿಕ ಕೃಷಿಯತ್ತಾ ರೈತರು ಮುಖಮಾಡಬೇಕು ಎಂದು ಕೃಷಿ ಮಾರಾಟ ಮತ್ತು ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ಸಲಹೆ ನೀಡಿದರು.

ತಾಲೂಕಿನ ಮಣಚನಹಳ್ಳಿ ಗ್ರಾಮದ ಸಮೀಪದಲ್ಲಿರುವ ತೆಂಗು ಸಂಸ್ಕರಣ ಘಟಕದಲ್ಲಿ ತಾಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವ ತೆಂಗು ದಿನಾಚರಣೆ ಮತ್ತು ತೆಂಗು ಬೆಳೆಗಾರರ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿ ತೆಂಗು ಬೆಳೆ ಬಹುದೊಡ್ಡ ಮಹತ್ವವನ್ನು ಪಡೆದುಕೊಂಡಿದೆ. ಅದಾಗ್ಯೂ ತೆಂಗು ಬೆಳೆಯುವ ರೈತರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ತೆಂಗಿಗೆ ಸರ್ಕಾರದ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ನೋವಿದೆ. ಇತ್ತೀಚೆಗೆ ತೆಂಗು ಬೆಲೆಯಲ್ಲಿ ಸಾಕಷ್ಟು ಏರುಪೇರು ಉಂಟಾಯಿತು. ತೆಂಗು ಬೆಳೆಗಾರರು ಹಿಂದಿನ ವರ್ಷ ಬಹಳ ಕಷ್ಟ ಅನುಭವಿಸಿದ್ದರು. ತೆಂಗಿನ ಧಾರಣೆಯನ್ನು ಕಾಯ್ದುಕೊಳ್ಳುವುದರಲ್ಲಿ ರಾಜ್ಯ ಮುಂದಿದೆ. ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಈ ಸಂಸ್ಕರಣಾ ಘಟಕವನ್ನು ಉಳಿಸಿಕೊಂಡು ಉತ್ತಮ ಮಟ್ಟಕ್ಕೆ ಕೊಂಡೊಯ್ಯಬೇಕಿದೆ ಎಂದರು.

ರೈತರು ಮುಸುಕಿನ ಜೋಳ ಮತ್ತು ಕಬ್ಬನ್ನು ಹೆಚ್ಚಾಗಿ ಬೆಳೆಯಬೇಕು. ಈ ನಡುವೆ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ವಿವಿಧ ಬೆಳೆಗಳನ್ನು ಬೆಳೆದರೇ ಮಾತ್ರ ರೈತರಿಗೆ ಉಜ್ವಲವಾದ ಭವಿಷ್ಯವಿದೆ. ಕೇಂದ್ರ ಸರ್ಕಾರ ರೈತರಿಗೆ ನೀಡುವ ಸವಲತ್ತುಗಳನ್ನು ಹಿಂಪಡೆದುಕೊಳ್ಳುತ್ತಿದೆ. ರೈತರ ಬೆಳೆಗಳಿಗೆ ಸ್ಥಿರವಾದ ಬೆಲೆಯನ್ನು ಕೊಡುವ ಪ್ರಧಾನ ಮಂತ್ರಿ ದೇಶದಲ್ಲಿ ಇಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರ ಡಿಸಿಸಿ ಬ್ಯಾಂಕ್ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತಿದೆ. ಉಚಿತ ವಿದ್ಯುತ್ ಹಾಗೂ ನೀರಾವರಿ ವ್ಯವಸ್ಥೆಗೆ ಒತ್ತುನೀಡಿದ್ದೇವೆ. ರಾಜ್ಯ ಹಾಲು ಉತ್ಪಾದನೆಯಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಂಡಿದೆ. ನಮ್ಮ ಎಪಿಎಂಸಿ ವತಿಯಿಂದ ತೆಂಗು ಬೆಳೆಗಾರರ ಸಹಕಾರಿ ಸಂಘಕ್ಕೆ ವಿಶೇಷವಾದ ಅನುದಾನವನ್ನು ನೀಡಲು ಚಿಂತನೆ ನಡೆಸಲಾಗವುದು. ಆ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಎಂಎಸ್ ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ, ಶಾಸಕ ಎ.ಆರ್.ಕೃಷ್ಣಮೂರ್ತಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನ), ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪನಾಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಾದೇವಪ್ಪ, ಎಂಪಿಎಂಸಿ ಅಧ್ಯಕ್ಷ ಸೋಮೇಶ್, ಸಹಕಾರ ಸಂಘದ ಅಧ್ಯಕ್ಷ ಎ.ಎಂ.ಮಹೇಶ್ ಪ್ರಭು, ನಿರ್ದೇಶಕರಾದ ಸಿದ್ದರಾಜು, ಹೆಬ್ಬಸೂರು ಬಸವಣ್ಣ, ಸೋಮಶೇಖರ್ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net