ವಾರದಲ್ಲಿ 6 ದಿನವೂ ಪೌಷ್ಟಿಕ ಆಹಾರ ವಿತರಣೆ

28rajesh1
Published on

ಚಾಮರಾಜನಗರ : ಮಕ್ಕಳ ಬೌದ್ಧಿಕ ಶಕ್ತಿ ಹೆಚ್ಚಿಸಿ ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಅಜೀಂ ಪ್ರೇಮ್ ಜಿ ಫೌಂಡೇಷನ್ ನೆರವಿನೊಂದಿಗೆ ಹೆಚ್ಚುವರಿಯಾಗಿ ವಾರದಲ್ಲಿ ಉಳಿದ ನಾಲ್ಕು ದಿನಗಳಲ್ಲಿಯೂ ಪೂರಕ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಉಪ್ಪಾರ ಬೀದಿಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಬೆಂಗಳೂರಿನ ಅಜೀಂ ಪ್ರೇಮ್ ಜಿ ಫೌಂಡೇಷನ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರಕ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈಗಾಗಲೇ ವಾರದಲ್ಲಿ 2 ದಿನ ಮೊಟ್ಟೆ, ಬಾಳೆಹಣ್ಣು ಹಾಗೂ ಶೆಂಗಾಚಿಕ್ಕಿ ವಿತರಿಸಲಾಗುತ್ತಿತ್ತು. ಮಕ್ಕಳ ಕಲಿಕಾ ಪ್ರಕ್ರಿಯೆಯನ್ನು ಪ್ರೇರೇಪಿಸುವ ಉದ್ದೇಶದಿಂದ ವಾರದಲ್ಲಿ 6 ದಿನಗಳಲ್ಲೂ ಪೂರಕ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ಶಾಲೆಗಳಲ್ಲಿ ಬಿಸಿಯೂಟ, ಕ್ಷೀರಭಾಗ್ಯ, ಶೂ ಭಾಗ್ಯ ಇವೆಲ್ಲವೂ ಮಕ್ಕಳ ಕಲಿಕಾ ಪ್ರಕ್ರಿಯೆಯನ್ನು ಪ್ರೇರೇಪಿಸಲು ಸಹಕಾರಿಯಾಗಿವೆ. ವಿದ್ಯೆ ಪ್ರತಿಯೊಬ್ಬರಿಗೂ ಬಹುಮುಖ್ಯ ಆಸ್ತಿ. ಶಿಕ್ಷಣದಿಂದ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗಲಿದೆ. ಇದನ್ನು ಮನಗಂಡಿರುವ ಅಜೀಂ ಪ್ರೇಮ್ ಜಿ ಫೌಂಡೇಷನ್ ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ಕಾಳಜಿ ವಹಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಮಾತನಾಡಿ, ಜಿಲ್ಲೆಯ 894 ಶಾಲೆಗಳ 8293 ಮಕ್ಕಳು ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಸೆ.25ರಿಂದ 2025ರ ಏ.10ರವರೆಗೆ 146 ಶಾಲಾ ದಿನಗಳಲ್ಲಿ ಇದಕ್ಕಾಗಿ 4 ಕೋಟಿ ರೂ. ವೆಚ್ಚವಾಗಲಿದೆ ಎಂದರು.

ಜಿಪಂ ಸಿಇಒ ಮೋನಾ ರೋತ್, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ರೇವಣ್ಣ, ನಗರಸಭೆ ಸದಸ್ಯ ಬಸವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಜಿ.ಶ್ರೀನಿವಾಸ್, ಕೊಳ್ಳೇಗಾಲ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ರಂಗಸ್ವಾಮಿ, ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್, ದೈಹಿಕ ಶಿಕ್ಷಣ ಶಿಕ್ಷಕ ಚಿಕ್ಕಬಸವಯ್ಯ, ಅಜೀಂ ಪ್ರೇಮ್ ಜಿ ಫೌಂಡೇಷನ್ ಸಂಸ್ಥೆಯ ನಂದೀಶ್, ಮಂಜುನಾಥ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net