ಚಾಮರಾಜನಗರ : ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದ ಸಲಹೆ ನೀಡಿದರು.
ನಗರದ ಡಾ. ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡಾಪಟುಗಳು ಸೋಲು-ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಬೇಕು. ಸೋತವರು ಈ ಬಾರಿ ಯಾವ ಹಂತದಲ್ಲಿ ವಿಫಲವಾಗಿದ್ದೀರಾ ಎಂಬುದನ್ನು ತಿಳಿದು, ಮುಂದಿನ ಹಂತಕ್ಕೆ ಅತ್ಯುತ್ತಮ ಪ್ರಯತ್ನ ಮಾಡಿ ಗೆಲುವು ಸಾಧಿಸಲು ಸಹಾಯವಾಗುತ್ತದೆ. ಗೆಲುವು ಸಾಧಿಸಿದವರು ಮುಂದಿನ ಹಂತದಲ್ಲಿ ಯಶಸ್ಸನ್ನು ಸಾಧಿಸಿ. ತೀರ್ಪುಗಾರರು ಪಕ್ಷಪಾತವಿಲ್ಲದೆ, ಪ್ರಶ್ನಾತೀತವಾಗಿ ನಿರಪೇಕ್ಷಿತವಾಗಿ ತೀರ್ಪು ನೀಡಬೇಕು ಎಂದರು.
ದೈಹಿಕ ಆರೋಗ್ಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತೇವೋ, ಅಷ್ಟೇ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಂಡರೆ ಮನುಷ್ಯ ಸರ್ವತೋಮುಖ ಅಭಿವೃದ್ಧಿ ಸಾಧಿಸಬಹುದು. ಹೊರ ಜಿಲ್ಲೆಗಳಿಂದ ಬಂದಿರುವ ಕ್ರೀಡಾಪಟುಗಳು ಜಿಲ್ಲೆಯ, ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಅವುಗಳ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಚಾಮರಾಜನಗರ ಮತ್ತು ರಾಮಸಮುದ್ರ ನಗರಾಭಿವೃದ್ಧಿ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ, ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಸ್ವಾಮಿ, ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯ ವಿ.ಶ್ರೀನಿವಾಸ್ ಪ್ರಸಾದ್, ವರ್ಗಿಸ್‌ಬಾನು ಹಾಗೂ ಇತರರು ಉಪಸ್ಥಿತರಿದ್ದರು.