ಚಾಮರಾಜನಗರ : ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೇಲೆ ಎ್ಐಆರ್ ದಾಖಲಾಗಿದ್ದರೂ, ರಾಜೀನಾಮೆ ನೀಡದೆ ರಾಜ್ಯದಲ್ಲಿ ಕೆಟ್ಟ ಸಂಸ್ಕೃತಿ ಹುಟ್ಟುಹಾಕಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಭಗವಂತ ಖೂಬ ಕಿಡಿಕಾರಿದರು.
ನಗರದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 56 ಕೋಟಿ ರೂ, ಮೌಲ್ಯದ 14 ಸೈಟ್‌ಗಳನ್ನು ಪಡೆದಿದ್ದಾರೆ. ಭ್ರಷ್ಟಾಚಾರದ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎ1 ಆರೋಪಿಯಾಗಿದ್ದಾರೆ. ಹೀಗಾಗಿ, ಅವರು ರಾಜೀನಾಮೆ ನೀಡಬೇಕು. ರಾಜೀನಾಮೆ ಕೊಡುವವರೆಗೂ ಹೋರಾಟ ಮಾಡುತ್ತೇವೆ. ಸಿದ್ದರಾಮಯ್ಯ ಅವರ ಭ್ರಷ್ಟ ಮುಖವನ್ನು ಹೊರಗೆಳೆಯುತ್ತೇವೆ ಎಂದರು.
ಅಂದು ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲಾದಾಗ ತಕ್ಷಣ ರಾಜೀನಾಮೆ ನೀಡಿದರು. ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡುವ ಮೂಲಕ ಅಂತಹ ಅಗ್ರಪಂಥಿಯಲ್ಲಿ ನಿಲ್ಲಬೇಕಿತ್ತು. ಅಧಿಕಾರ ದಾಹಕ್ಕೆ ಲಜ್ಜೆಗೆಟ್ಟ ಭಂಡತನ ಪ್ರದರ್ಶಿಸುತ್ತಿದ್ದಾರೆ. ಅಧಿಕಾರದಿಂದ ನೈತಿಕತೆ ಪಾಠ ಮಾಡುತ್ತಿದ್ದ ಸಿದ್ದರಾಮಯ್ಯ, ಈಗ ಅನೈತಿಕತೆ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದರು.
ಮುಡಾದಲ್ಲಿ ಮೂಲಪ್ರತಿಯನ್ನ ಬದಲು ಮಾಡಲು ಪ್ರಯತ್ನ ಮಾಡಿದ್ದಾರೆ. ಕಳೆದ ಎರಡು ತಿಂಗಳಿಂದ ಈ ಪ್ರಯತ್ನ ನಡೆದಿದೆ. ಈ ವಿಚಾರದಲ್ಲಿ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕಾದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಮಾತೆತ್ತಿದರೆ ಸಿಎಂ ರಾಜಕೀಯ ಬಾಂಡ್ ವಿಚಾರದ ಬಗ್ಗೆ ಮಾತನಾಡುತ್ತಾರೆ. ಎಲ್ಲ ಪಕ್ಷದವರು ರಾಜಕೀಯ ಬಾಂಡ್ (ದೇಣಿಗೆ) ಪಡೆದಿದ್ದಾರೆ. ಭ್ರಷ್ಟಾಚಾರಾ ಬೇರೆ, ದೇಣಿಗೆ ಪಡೆಯೋದೆ ಬೇರೆ ಎಂಬುದು ಸಿಎಂಗೆ ಅರಿವಿಲ್ಲ ಎಂದರು.
ರಾಹುಲ್ ಗಾಂಧಿ ಲೋಕಸಭೆ ಚುನಾವಣೆ ವೇಳೆ ಸಂವಿಧಾನ ರಕ್ಷಿಸುತ್ತೇವೆ, ಈ ನೆಲದ ಕಾನೂನಿಗೆ ಗೌರವ ಕೊಡುತ್ತೇವೆಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ರಾಜ್ಯದಲ್ಲಿ ಸಿಬಿಐಗೆ ಅಂಕುಶ ಹಾಕುವ ಮೂಲಕ ಅದರ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.