

ಚಾಮರಾಜನಗರ: ನದಿ ತೀರದಲ್ಲಿ ಕೃಷಿ ಭೂಮಿ ಹೊಂದಿರುವವರಿಗೆ ನೀರಿಗೇನು ಬರವಿಲ್ಲ. ಆದರೆ, ಇಲ್ಲೊಬ್ಬ ರೈತ ನದಿತಟದಲ್ಲಿರುವ ತನ್ನ ಜಮೀನಿನಲ್ಲಿ ಸಾವಯವ ಕೃಷಿ ಮಾಡುತ್ತಾ ಕಡಿಮೆ ನೀರು ಬಳಕೆ ಮಾಡುತ್ತಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ಶಿವಾನಂದ ಸ್ವಾಮಿ ವ್ಯವಸಾಯದ ವಿಧಾನ ಗಮನ ಸೆಳೆಯುತ್ತಿದೆ. ಮುಳ್ಳೂರು-ಹಳೇಹಂಪಾಪುರ ಗ್ರಾಮದ ಗಡಿಯಲ್ಲಿ ಇವರಿಗೆ ಮತ್ತು ಕುಟುಂಬಸ್ಥರಿಗೆ ಸೇರಿದ ಒಟ್ಟು 10 ಎಕರೆ ಜಮೀನು ಇದೆ. ನೀರಿನ ಸೌಲಭ್ಯಕ್ಕಾಗಿ 2 ತೆರೆದ ಬಾವಿಗಳಿವೆ. ಪ್ರಸ್ತುತ 6.5 ಎಕರೆ ಭೂಮಿಯಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. 4 ಎಕರೆಯಲ್ಲಿ ಭತ್ತ, 2.5 ಎಕರೆಯಲ್ಲಿ ಕಬ್ಬು ಬೆಳೆದಿದ್ದಾರೆ.
ಜಮೀನಿನ ಪಕ್ಕದಲ್ಲೇ ಕಾವೇರಿ ನದಿ ನೀರು ಹರಿಯುತ್ತಿದೆ. ಪ್ರವಾಹ ಬಂದಾಗ ಜಮೀನು ಜಲಾವೃತಗೊಳ್ಳುತ್ತದೆ. ನೆರೆ ಇವರ ಪಾಲಿಗೆ ವರ್ಷದ ಕಾಯಂ ಅತಿಥಿ. ಇದರ ಬಗ್ಗೆ ರೈತ ಶಿವಾನಂದ ತಲೆಕೆಡಿಸಿಕೊಂಡಿಲ್ಲ. ಆದರೆ, ನೀರಿನ ಬಳಕೆಯ ವಿಚಾರದಲ್ಲಿ ವೈಜ್ಞಾನಿಕ ಮನೋಭಾವ ಬೆಳೆದಿದೆ. ಕೃಷಿಯಲ್ಲಿ ಕಡಿಮೆ ನೀರು ಬಳಸಿ ಕೃಷಿ ಮಾಡುವ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ.
ಭತ್ತ, ಕಬ್ಬಿಗೆ ಕಡಿಮೆ ನೀರು:
ರೈತ ಶಿವಾನಂದ ಅವರು ತಾವು ಬೆಳೆದಿರುವ ಕಬ್ಬು, ಭತ್ತದ ಬೆಳೆಗೆ ಕಡಿಮೆ ನೀರು ಕೊಡುತ್ತಿದ್ದಾರೆ. ನದಿ ಪಾತ್ರದಲ್ಲಿರುವ ಜಮೀನಿನಲ್ಲಿ ಭೂಮಿ ತೇವಾಂಶದಿಂದ ಕೂಡಿದೆ. ಇಲ್ಲಿ ಬೆಳೆಗೆ ಹೆಚ್ಚು ನೀರು ಹರಿಸಲು ಸಾಧ್ಯವಿಲ್ಲ. ಭೂಮಿಗೆ ತಕ್ಕಂತೆ ನೀರು ಒದಗಿಸಬೇಕು. ಈ ಹಿನ್ನೆಲೆಯಲ್ಲಿ ಭತ್ತಕ್ಕೆ 2-3 ದಿನಗಳಿಗೆ ಒಮ್ಮೆ, ಕಬ್ಬು ಬೆಳೆಗೆ 15 ದಿನಗಳಿಗೊಮ್ಮೆ ನೀರು ನೀಡುತ್ತಿದ್ದಾರೆ. ಬೆಳೆಗೆ ರಾಸಾಯನಿಕ ಗೊಬ್ಬರ ಹಾಕುತ್ತಿಲ್ಲ. ಸಾವಯವ ವಿಧಾನ ಬಳಕೆ ಮಾಡುತ್ತಿದ್ದಾರೆ. ಕೊಟ್ಟಿಗೆ ಗೊಬ್ಬರ, ಜೀವಾಮೃತ ಬಳಕೆ ಮಾಡುತ್ತಿದ್ದಾರೆ.
ಈ ಹಿಂದೆ ಶಿವಾನಂದ ರಾಸಾಯನಿಕ ಬಳಕೆ ಮಾಡಿ ಕೃಷಿ ಮಾಡುತ್ತಿದ್ದರು. ಇದರಿಂದಾಗಿ ಭೂಮಿ ತನ್ನ ಸತ್ವ ಕಳೆದುಕೊಳ್ಳುತ್ತಿತ್ತು. ವಿಷಾಹಾರ ಬೆಳೆದು ಜನರಿಗೆ ನೀಡುತ್ತಿರುವ ಬೇಸರವೂ ಕಾಡುತ್ತಿತ್ತು. ರೈತ ಮುಖಂಡ ಹೊನ್ನೂರು ಪ್ರಕಾಶ್ ಅವರಿಂದ ಶಿವನಾಂದ ಪ್ರೇರಿತರಾದರು. ಅವರ ಜಮೀನಿಗೆ ಭೇಟಿ ನೀಡಿ ಸಾವಯವ ವಿಧಾನದಲ್ಲಿ ಕೃಷಿ ಮಾಡುತ್ತಿರುವುದನ್ನು ಅಧ್ಯಯನ ಮಾಡಿದರು. ಬಳಿಕ ಹಂತ ಹಂತವಾಗಿ ಸಾವಯವ ಕೃಷಿ ಮಾಡುತ್ತಾ, ಇದೀಗ 6.5 ಎಕರೆಯಲ್ಲಿ ಪಾರಂಪರಿಕ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಸರ್ಕಾರದಿಂದ ಸಾಲಸೌಲಭ್ಯ ಅಥವಾ ತರಬೇತಿಗಳನ್ನು ಪಡೆದುಕೊಳ್ಳದ ಶಿವನಾಂದ ಅವರಿಗೆ ರೈತ ಸಂಘದ ಮಿತ್ರರ ಮಾರ್ಗದರ್ಶನವೇ ಪ್ರಧಾನವಾಗಿದೆ.
ಸಾವಯವ ಬೆಲ್ಲ ತಯಾರಿಸಿ ಮಾರಾಟ:
ರೈತ ಶಿವಾನಂದ ತಾವು ಬೆಳೆದ ಸಾವಯವ ಕಬ್ಬಿನ ಬೆಳೆಯನ್ನು ಕಾರ್ಖಾನೆಗೆ ಮಾರಾಟ ಮಾಡುವುದಿಲ್ಲ. ಬದಲಾಗಿ ತಮ್ಮ ಜಮೀನಿಲ್ಲೇ ಚಿಕ್ಕದಾಗಿ ಆಲೆಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಇಲ್ಲಿ ಬೆಲ್ಲ ತಯಾರು ಮಾಡುತ್ತಾರೆ. ಮುಳ್ಳೂರು ಗ್ರಾಮದಲ್ಲಿ ಸಾವಯವ ಬೆಲ್ಲ ಮಾರಾಟ ಮಾಡುತ್ತಿದ್ದಾರೆ. ಚಾಮರಾಜನಗರ ಮಾತ್ರವಲ್ಲದೆ, ಬೇರೆ ಜಿಲ್ಲೆಗಳಿಂದಲೂ ಬಂದು ಇವರ ಬಳಿ ಬೆಲ್ಲ ಖರೀದಿ ಮಾಡುತ್ತಾರೆ. ಜಮೀನಿನಲ್ಲಿ 50 ತೆಂಗಿನ ಮರಗಳಿವೆ. ಒಟ್ಟಾರೆ ಕೃಷಿಯಲ್ಲಿ ವಾರ್ಷಿಕವಾಗಿ 3-4 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದೇನೆ ಎಂದು ಅವರು ಹೇಳುತ್ತಾರೆ.
ಜಮೀನು ಜಲಾವೃತಗೊಂಡಾಗ..
ಕಾವೇರಿ ನದಿತಟದಲ್ಲೇ ಶಿವಾನಂದ ಅವರ ಜಮೀನು ಇದೆ. ಕಾವೇರಿ ನದಿ ನೀರಿನ ಹರಿವು ಹೆಚ್ಚಾದಾಗ ಜಮೀನು ಜಲಾವೃತಗೊಳ್ಳುತ್ತದೆ. ಆಲೆಮನೆಗೆ ಅಳವಡಿಸಿರುವ ಛಾವಣಿವರೆಗೂ ನೀರು ಹರಿಯುವಷ್ಟು ಅಪಾಯ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ಬೆಳೆ ಮತ್ತು ತಯಾರಿಸಿದ ಬೆಲ್ಲ ರಕ್ಷಣೆ ಮಾಡಿಕೊಳ್ಳುವುದು ಸವಾಲಿನ ಕೆಲಸ. ಹೀಗಾಗಿ, ರೈತ ಶಿವಾನಂದ ತಮ್ಮ ಬಳಿ ಒಂದು ತೆಪ್ಪವನ್ನೇ ಇಟ್ಟುಕೊಂಡಿದ್ದಾರೆ. ಹಿಂದಿನ ವರ್ಷಗಳಲ್ಲಿ ಜಮೀನಿಗೆ ನೀರು ನುಗ್ಗಿದಾಗ ತೆಪ್ಪದಲ್ಲಿ ಬಂದು ಬೆಲ್ಲ, ಭತ್ತದ ಚೀಲಗಳನ್ನು ತೆಗೆದುಕೊಂಡು ಹೋಗಿದ್ದನ್ನು ಸ್ಮರಿಸುತ್ತಾರೆ.
ಕಡಿಮೆ ನೀರು ಅಧಿಕ ಇಳುವರಿ:
ಕೃಷಿಯಲ್ಲಿ ಕಡಿಮೆ ನೀರು ಬಳಸಿದರೆ ಅಧಿಕ ಇಳುವರಿ ಪಡೆಯಬಹುದು ಎಂದು ರೈತ ಶಿವಾನಂದ ಹೇಳುತ್ತಾರೆ. ಬೆಳೆ ಭೂಮಿಯಲ್ಲಿರುವ ತೇವಾಂಶವನ್ನು ಹೀರಿಕೊಂಡು ಬೆಳೆಯುತ್ತದೆ. ನೀರು ಇಲ್ಲದೆ ಹೋದರೆ ಹೇಗೆ ಬೆಳೆ ಒಣಗಿ ಹೋಗುತ್ತದೆಯೋ ಹಾಗೆಯೇ ಅಧಿಕ ಪ್ರಮಾಣದಲ್ಲಿ ನೀರು ಹರಿಸಿದರೆ ಕೊಳೆತು ಹೋಗುತ್ತದೆ. ಹೀಗಾಗಿ, ಅಗತ್ಯಕ್ಕೆ ತಕ್ಕಂತೆ ನೀರುಣಿಸಬೇಕು. ಬೆಳೆಗೆ ಕಡಿಮೆ ನೀರು ಒದಗಿಸುವುದರಿಂದ ನನಗೆ ಹೆಚ್ಚು ಇಳುವರಿ ಸಿಕ್ಕಿದೆ ಎಂದಿದ್ದಾರೆ.
ನನ್ನ ಜಮೀನು ನದಿ ಪಕ್ಕದಲ್ಲೇ ಇದೆ. ನೀರಿನ ಸೌಲಭ್ಯಕ್ಕಾಗಿ ಎರಡು ಬಾವಿಗಳಿವೆ. ಅಂತರ್ಜಲಮಟ್ಟವೂ ಉತ್ತಮವಾಗಿದೆ. ಹಾಗೆಂದು ಕೃಷಿಗೆ ಅನಗತ್ಯವಾಗಿ ನೀರು ಬಳಕೆ ಮಾಡುತ್ತಿಲ್ಲ. ಭತ್ತ ಮತ್ತು ಕಬ್ಬಿನ ಬೆಳೆಗೆ ಕಡಿಮೆ ನೀರುಣಿಸುತ್ತಿದ್ದೇನೆ. ಈ ರೀತಿ ಮಾಡುವುದರಿಂದ ಅಧಿಕ ಇಳುವರಿಯೂ ದೊರೆಯುತ್ತದೆ. ಸಾವಯವ ಪದ್ಧತಿಯನ್ನು ಹಂತ ಹಂತವಾಗಿ ಅಳವಡಿಸಿಕೊಂಡಿದ್ದೇನೆ. ಇದರಿಂದ ಮಣ್ಣಿನ ಲವತ್ತತೆ ಹೆಚ್ಚಾಗಿದೆ.ಶಿವಾನಂದ ಸ್ವಾಮಿ, ಮುಳ್ಳೂರು ಗ್ರಾಮದ ರೈತ, ಕೊಳ್ಳೇಗಾಲ