

ಹನೂರು: ತಾಲೂಕಿನ ಕುರಟ್ಟಿ ಹೊಸೂರು ಭಾಗಕ್ಕೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದ ಪರಿಣಾಮ ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ತುಂಬಾ ತೊಂದರೆ ಪಡುವಂತಾಗಿದೆ. ಆದ್ದರಿಂದ ಬಸ್ ಸೌಕರ್ಯಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಭಾಗದ ದಂಟಳ್ಳಿ, ಕುರಟ್ಟಿ ಹೊಸೂರು, ಶೆಟ್ಟಳ್ಳಿ ಹಾಗೂ ಭದ್ರಯ್ಯನಹಳ್ಳಿಯ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಹನೂರು ಹಾಗೂ ಕೊಳ್ಳೇಗಾಲದ ಶಾಲಾ, ಕಾಲೇಜುಗಳಿಗೆ ತೆರಳುತ್ತಾರೆ. ಆದರೆ ಸರಿಯಾದ ಸಮಯಕ್ಕೆ ಬಸ್ ಸೌಕರ್ಯವಿಲ್ಲದ ಪರಿಣಾಮ ಬೆಳಗ್ಗೆ 6.15ಕ್ಕೆ ದಂಟಳ್ಳಿಯಿಂದ ಹೊರಟು ಕೌದಳ್ಳಿಯಿಂದ ವಾಪಸಾಗುವ ಸಾರಿಗೆ ಬಸ್ಸಿನಲ್ಲಿ ತೆರಳಬೇಕಿದ್ದು, ಅನನುಕೂಲವಾಗುತ್ತಿದೆ. ಇದರಿಂದ ಹನೂರು ಹಾಗೂ ಕೊಳ್ಳೇಗಾಲಕ್ಕೆ ಬಸ್ ವ್ಯವಸ್ಥೆ ಇಲ್ಲದ ಪರಿಣಾಮ ವಿದ್ಯಾರ್ಥಿಗಳು ಕೌದಳ್ಳಿಯ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ನಿಲ್ಲಬೇಕಿದೆ.
ಮ.ಬೆಟ್ಟದಿಂದ ಆಗಮಿಸುವ ಬಸ್ಸಿನಲ್ಲಿ ನೂಕುನುಗ್ಗಲಿನಲ್ಲೇ ತೆರಳುವಂತಹ ಪರಿಸ್ಥಿತಿ ಇದೆ. ಮ.ಬೆಟ್ಟ ಜಾತ್ರಾ ವೇಳೆ ಬಸ್‌ಗಳು ಕೌದಳ್ಳಿಯಲ್ಲಿ ನಿಲ್ಲಿಸುವುದೇ ಇಲ್ಲ. ಹಾಗಾಗಿ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ತೆರಳಲು ಸಮಸ್ಯೆಯಾಗಿದೆ. ಈ ಭಾಗದಲ್ಲಿ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ತೆರಳುವ ಸಮಯಕ್ಕೆ ಬಸ್ ಬಿಡುವಂತೆ ಕೊಳ್ಳೇಗಾಲ ಡಿಪೋ ಅಧಿಕಾರಿಗಳಲ್ಲಿ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ವಿದ್ಯಾರ್ಥಿಗಳು ನಿತ್ಯ ತೊಂದರೆ ಪಡುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇನ್ನಾದರೂ ಇತ್ತ ಗಮನಹರಿಸಿ ಈ ಭಾಗದಿಂದ ಬೆಳಗ್ಗೆ 7ಕ್ಕೆ ಬಸ್ ಬಿಡುವಂತೆ ಕುರಟ್ಟಿ ಹೊಸೂರು ಗ್ರಾಮಸ್ಥ ಕೆ.ಎಂ.ಬಸವಣ್ಣ ಒತ್ತಾಯಿಸಿದ್ದಾರೆ.