ಬಾಲಕರ ಮೇಲೂ ಲೈಂಗಿಕ ‘ದೌರ್ಜನ್ಯ’

27rajesh2
Published on

ಚಾಮರಾಜನಗರ: ಮಕ್ಕಳ ಮೇಲೆ ಲೈಂಗಿಕ ಶೋಷಣೆ ಹೀನ ಕೃತ್ಯವಾಗಿದ್ದು ಜಿಲ್ಲೆಯಲ್ಲಿ ಬಾಲಕರ ಮೇಲೂ ಲೈಂಗಿಕ ದೌರ್ಜನ್ಯ ನಡೆದಿರುವ ಪ್ರಕರಣಗಳು ವರದಿಯಾಗಿವೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನೀಡಿರುವ ಮಾಹಿತಿ ಪ್ರಕಾರ 2022-23ರಲ್ಲಿ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಪ್ರಕರಣಗಳು ವರದಿಯಾಗಿಲ್ಲ. ಆದರೆ 2024ರಲ್ಲಿ ಜನವರಿಂದ ಈವರೆಗೆ ಒಟ್ಟು 3 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯ ಮೂರು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಡಿ ದೂರುಗಳು ಸಲ್ಲಿಕೆಯಾಗಿವೆ. ಈ ಸಂಬಂಧ ಪೊಲೀಸರು ಕ್ರಮವನ್ನೂ ಕೈಗೊಂಡಿದ್ದಾರೆ.

ಘಟನೆ 1: ಜಿಲ್ಲೆಯ ಹಳ್ಳಿಯೊಂದರಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಪಕ್ಕದ ಬೀದಿಯ ನಿವಾಸಿಯೊಬ್ಬ ಲೈಂಗಿಕ ದೌರ್ಜನ್ಯವೆಸಗಿದ್ದ. ಬಾಲಕ ತನ್ನ ಸಹೋದರ ಮತ್ತು ಸ್ನೇಹಿತನೊಂದಿಗೆ ಆಟವಾಡುತ್ತಿದ್ದ. ಅಲ್ಲಿಗೆ ಹೋದ ಆರೋಪಿಯು ಬಾಲಕನನ್ನು ಎತ್ತಿಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದ ಎಂದು ಪೊಲೀಸ್ ಠಾಣೆಗೆ ತಾಯಿ ದೂರು ದಾಖಲಿಸಿದ್ದಾಳೆ.
ಘಟನೆ 2: ಶಿಕ್ಷಕನೇ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಬೆಳಕಿಗೆ ಬಂದಿತ್ತು. ಪ್ರತಿಷ್ಠಿತ ಸಂಸ್ಥೆಯೊಂದು ನಡೆಸುತ್ತಿರುವ ವಸತಿ ಶಾಲೆಯ ವಿದ್ಯಾರ್ಥಿಯೊಬ್ಬನನ್ನು ಶಿಕ್ಷಕ ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದ ಎಂದು ದೂರು ಸಲ್ಲಿಕೆಯಾಗಿತ್ತು.
ಘಟನೆ 3: ಪಕ್ಕದ ಮನೆಗೆ ನೀರು ಕುಡಿಯಲು ಹೋದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ತಿಳಿದುಬಂದಿದೆ. ಈ ಮೂರು ಪ್ರಕರಣಗಳು ಬಾಲಕರ ಮೇಲಿನ ಲೈಂಗಿಕ ಶೋಷಣೆಗಳನ್ನು ತೆರೆದಿಟ್ಟಿವೆ.

ಮಕ್ಕಳು ಎಂದ ಮೇಲೆ ಬಾಲಕರು ಮತ್ತು ಬಾಲಕಿಯರು ಎಲ್ಲ ಒಂದೇ. ರಾಷ್ಟ್ರದ ಅತ್ಯಮೂಲ್ಯ ಆಸ್ತಿಯಾಗಿರುವ ಮಕ್ಕಳನ್ನು ಕಾಳಜಿ, ರಕ್ಷಣೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ಒಂದು ಮಗು ಪಾಲನೆ, ಸಂರಕ್ಷಣೆ, ಅಭಿವೃದ್ಧಿ ಮತ್ತು ಬಾಲ್ಯವನ್ನು ಅನುಭವಿಸುವ ಮತ್ತು ಪರಿಪೂರ್ಣ, ಸಂಪೂರ್ಣ ವ್ಯಕ್ತಿಯಾಗಿ ಬೆಳೆಯುವ ಹಕ್ಕನ್ನು ಹೊಂದಿದೆ. ಮಕ್ಕಳಿಗೆ ಉತ್ತಮ ಆರೋಗ್ಯ, ಪೌಷ್ಟಿಕಾಂಶ, ಪೋಷಣೆ, ಶಿಕ್ಷಣ, ವಸತಿ, ರಕ್ಷಣೆ, ಮನೋ ಸಾಮಾಜಿಕ ಬೆಂಬಲ, ನಿಂದನೆ ಮತ್ತು ಶೋಷಣೆಮುಕ್ತ ವಾತಾವರಣ ಕಲ್ಪಿಸುವುದು ಮಕ್ಕಳ ಹಕ್ಕುಗಳ ಪ್ರಮುಖ ತತ್ವವಾಗಿದೆ. ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ 34ರ ಪ್ರಕಾರ 18 ವರ್ಷದ ತನಕ ಯಾವುದೇ ಮಗು ಲೈಂಗಿಕ ದೌರ್ಜನ್ಯ, ಹಿಂಸೆ, ಕಿರುಕುಳ ಅನುಭವಕ್ಕೆ ಒಳಗಾಗಬಾರದು ಎಂದು ಹೇಳಿದೆ.

ಪೋಕ್ಸೋ ಪ್ರಕರಣಗಳು
ಜಿಲ್ಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಂಕಿ-ಅಂಶಗಳು ಇಂತಿವೆ. ಪೋಕ್ಸೋ ಪ್ರಕರಣದಡಿ ಕಳೆದ 3 ವರ್ಷಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಪೊಲೀಸ್ ಇಲಾಖೆಯಿಂದ ಪಡೆದಿರುವ ಮಾಹಿತಿ ಪ್ರಕಾರ, 2022ರಲ್ಲಿ 84, 2023ರಲ್ಲಿ 48, 2024ರಲ್ಲಿ 67 ಪ್ರಕರಣಗಳು ದಾಖಲಾಗಿವೆ.
ಲೈಂಗಿಕ ದೌರ್ಜನ್ಯ ಕೇವಲ ಹೆಣ್ಣು ಮಕ್ಕಳ ಮೇಲೆ ನಡೆಯುತ್ತದೆ ಎನ್ನುವುದು ಸುಳ್ಳು. 2007ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ನಡೆಸಿದ ಅಧ್ಯಯನದಂತೆ, ಲೈಂಗಿಕ ದೌರ್ಜನ್ಯಗಳಿಗೆ ಶೇ.52.94 ಹುಡುಗರು, ಶೇ.47.6ರಷ್ಟು ಹುಡುಗಿಯರು ಒಳಗಾಗಿದ್ದಾರೆ ಎಂದು ಮಕ್ಕಳ ರಕ್ಷಣಾ ನಿರ್ದೇಶಾಲಯವು ಹೊರತಂದಿರುವ ‘ಘನತೆಯ ಬದುಕು’ ಎಂಬ ಮಾಧ್ಯಮ ಮತ್ತು ಮಕ್ಕಳ ಕೈಪಿಡಿಯಲ್ಲಿ ತಿಳಿಸಿದೆ.

ಮಕ್ಕಳು ಎಂದರೆ ಬಾಲಕ ಮತ್ತು ಬಾಲಕಿ ಇಬ್ಬರೂ ಸೇರಿಕೊಳ್ಳುತ್ತಾರೆ. ಮಕ್ಕಳ ಮೇಲೆ ದೌರ್ಜನ್ಯವೆಸಗಿದರೆ ಪೋಕ್ಸೋ ಪ್ರಕರಣದಡಿ ದೂರು ದಾಖಲಾಗುತ್ತದೆ. ಜಿಲ್ಲೆಯಲ್ಲಿ ಬಾಲಕರ ಮೇಲೆ ದೌರ್ಜನ್ಯವೆಸಗಿರುವ 3 ಪ್ರಕರಣಗಳು ದಾಖಲಾಗಿವೆ.ಚೆಲುವರಾಜು, ಮಕ್ಕಳ ರಕ್ಷಣಾಧಿಕಾರಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net