ಒಂದು ದೇಶ ಒಂದು ಚುನಾವಣೆ ಖಂಡಿಸಿ ಪ್ರತಿಭಟನೆ

26rajesh3
Published on

ಚಾಮರಾಜನಗರ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂದಿ ಅವರನ್ನು ಮೀಸಲಾತಿ ವಿರೋಧಿ ಎಂದು ಬಿಂಬಿಸುತ್ತಿರುವುದು ಮತ್ತು ಒಂದು ದೇಶ ಒಂದು ಚುನಾವಣೆ ವಿಷಯವನ್ನು ಚರ್ಚಿಸದೇ ಜಾರಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಹಾಗೂ ಶಾಸಕ ಮುನಿರತ್ನ ಅವರನ್ನು ಕಠಿಣ ಶಿಕ್ಷೆಗೆ ಗುರಿಯಾಗಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಡಿ.ಜಿ.ಸಾಗರ್ ಬಣದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಗುರುವಾರ ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ, ಬಿಜೆಪಿ ಪಕ್ಷ ಹಾಗೂ ಶಾಸಕ ಮುನಿರತ್ನ ವಿರುದ್ಧ ೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ ಮಾತನಾಡಿ, ಒಂದು ದೇಶ ಒಂದು ಚುನಾವಣೆಯನ್ನು ಏಕಾಏಕಿ ಅನುಷ್ಠಾನ ಮಾಡಲು ಹೊರಟಿರುವುದು ಮೋದಿ ಸರ್ಕಾರದ ದುರುದ್ದೇಶವನ್ನು ತೋರಿಸುತ್ತದೆ. ಈ ವಿಷಯವನ್ನು ಚರ್ಚಿಸದೆ ಏಕಾಏಕಿ ಜಾರಿ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ. ಕೇಂದ್ರ ಸರ್ಕಾರ ಒಂದು ದೇಶ, ಒಂದು ಚುನಾವಣೆ ವಿಚಾರವನ್ನು ಕೈ ಬಿಟ್ಟು, ಹಿಂದಿನ ಮಾದರಿಯಲ್ಲಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮೀಸಲಾತಿ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿಯವರು ಸುಳ್ಳು ಹರಡುತ್ತಿದ್ದಾರೆ. ಸದಾ ಕಾಲವೂ ಮೀಸಲಾತಿಯನ್ನು ವಿರೋಧಿಸಿಕೊಂಡು ಬಂದ ಬಿಜೆಪಿಯವರು ಸಂವಿಧಾನವನ್ನೇ ಬದಲಾವಣೆ ಮಾಡಲು ಹೊರಟಿದ್ದರು. ಇವರಿಗೆ ಮೀಸಲಾತಿ ಕುರಿತು ಮಾತನಾಡಲು ಯಾವ ನೈತಿಕತೆ ಇದೆ. ಒಕ್ಕಲಿಗ ಮತ್ತು ದಲಿತ ಸಮುದಾಯವನ್ನು ಅವಹೇಳನ ಮಾಡುವ ರೀತಿಯಲ್ಲಿ ನಿಂಧಿಸಿರುವ ಶಾಸಕ ಮುನಿರತ್ನ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟಲನಾ ಸಂಚಾಲಕ ರಂಗಸ್ವಾಮಿ, ಮಂಜೇಶ್, ಆಟೋ ಉಮೇಶ್, ಮಹದೇವಯ್ಯ, ಉಮೇಶ್ ಕುಮಾರ್, ಮಹದೇವಮ್ಮ, ಮಲ್ಲಿಕಾರ್ಜುನ, ಗಾರೆ ನಂಜುಂಡ ಸ್ವಾಮಿ, ವೆಂಕಟರಮಣಸ್ವಾಮಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net