

ಹನೂರು: ತಾಲೂಕು ಮಾರ್ಟಳ್ಳಿ ಹಾಗೂ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಗುರುವಾರ ಒಡಿಪಿ ಸಂಸ್ಥೆಯ ಸ್ವಸಹಾಯ ಸಂಘದ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿದರು.
ಈ ವೇಳೆ ಸಂಸ್ಥೆಯ ವಲಯ ಸಂಯೋಜಕಿ ಲಿಲ್ಲಿ ಮೇರಿ ಮಾತನಾಡಿ, ಒಡಿಪಿ ಸಂಸ್ಥೆಯು ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಮಾರ್ಟಳ್ಳಿ, ವಡ್ಡರದೊಡ್ಡಿ, ಬಿದರಹಳ್ಳಿ, ಸುಳವಾಡಿ, ಸಂದನಪಾಳ್ಯ, ಹೂಗ್ಯಂ ಗ್ರಾಪಂ ವ್ಯಾಪ್ತಿಯ ಕೂಡಲೂರು ಹಾಗೂ ಜಲ್ಲಿಪಾಳ್ಯದಲ್ಲಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಬಡ ಮಹಿಳೆಯರು, ಸಣ್ಣ ರೈತರ ಅಭಿವೃದ್ಧಿ, ಆರೋಗ್ಯ ಮತ್ತು ನೈರ್ಮಲ್ಯ, ಮಕ್ಕಳ ಹಕ್ಕುಗಳ ರಕ್ಷಣೆ, ಪರಿಸರ ಸರಂಕ್ಷಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.
ಇದೀಗ ಡೆಂೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂಗನವಾಡಿ, ಸಮುದಾಯ ಭವನ, ಚರ್ಚ್ ಆವರಣ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಸಂಸ್ಥೆಯ ಕಾರ್ಯಕರ್ತರಾದ ಲಿಲ್ಲಿ ಸೆಲ್ವಕುಮಾರಿ, ಪಾಸ್ಕಮೇರಿ ಇದ್ದರು.