ಈ ಬಾರಿಯ ದಸರಾದಲ್ಲಿ ದರ್ಬಾರೋತ್ಸವ

26rajesh5
Published on

ಚಾಮರಾಜನಗರ: ಶ್ರೀಚಾಮರಾಜೇಂದ್ರ ಒಡೆಯರು ಜನ್ಮತಾಳಿದ ಸವಿನೆನಪಿಗಾಗಿ ದಸರಾ ಸಮಯದಲ್ಲಿ ನಡೆಯುತ್ತಿದ್ದ ಐತಿಹಾಸಿಕ ಶ್ರೀಚಾಮರಾಜೇಶ್ವರ ದರ್ಬಾರೋತ್ಸವ, ಈ ಬಾರಿಯ ಚಾಮರಾಜನಗರ ದಸರಾ ಮಹೋತ್ಸವದಲ್ಲಿ ಮರುಕಳಿಸುತ್ತಿದೆ.

ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮರಾಜನಗರ ಜಿಲ್ಲಾಡಳಿತದ ವತಿಯಿಂದ ಅ.7, 8 ಮತ್ತು 9 ರಂದು ಮೂರು ದಿನಗಳ ಕಾಲ ದಸರಾ ಮಹೋತ್ಸವವನ್ನು ಆಯೋಜನೆ ಮಾಡಲಾಗಿದೆ. ದಸರಾ ಮಹೋತ್ಸವಕ್ಕೆ ಈಗಾಗಲೇ ಸಾಕಷ್ಟು ಸಿದ್ಧತೆಗಳು ನಡೆಯುತ್ತಿದೆ. ಈ ನಡುವೆ ಮೈಸೂರು ದಸರಾಕ್ಕೂ, ಈ ಹಿಂದೆ ಚಾಮರಾಜನಗರದಲ್ಲಿ ನಡೆಯುತ್ತಿದ್ದ ಶ್ರೀಚಾಮರಾಜೇಶ್ವರ ದರ್ಬಾರೋತ್ಸವಕ್ಕೂ ಐತಿಹಾಸಿಕ ಸಂಬಂಧವಿದ್ದು, ಚಾ.ನಗರ ದಸರಾ ಮಹೋತ್ಸವದಲ್ಲಿ ಒಂದು ದಿನ ಶ್ರೀಚಾಮರಾಜೇಶ್ವರ ದರ್ಬಾರೋತ್ಸವ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ಮೂಲಕ ನೇಪಥ್ಯಕ್ಕೆ ಸರಿದಿದ್ದ ಶ್ರೀಚಾಮರಾಜೇಶ್ವರ ದರ್ಬಾರ್‌ಅನ್ನು ಶತಮಾನಗಳ ನಂತರ ಸಾರ್ವಜನಿಕರು ಕಣ್ತುಂಬಿಕೊಳ್ಳುವ ಅವಕಾಶವನ್ನು ಜಿಲ್ಲಾಡಳಿತ ಈಬಾರಿಯ ದಸರಾ ಮಹೋತ್ಸವದಲ್ಲಿ ಮಾಡಿಕೊಡಲು ಮುಂದಾಗಿದೆ.

ಮುಮ್ಮಡಿ ಕೃಷ್ಣರಾಜ ಒಡೆಯರ ತಂದೆ ಚಾಮರಾಜೇಂದ್ರ ಒಡೆಯರು 1776 ರಲ್ಲಿ ಚಾಮರಾಜನಗರದಲ್ಲಿ ಜನಿಸಿದರು. ತಮ್ಮ ತಂದೆಯ ನೆನಪಿಗಾಗಿ ಕೃಷ್ಣರಾಜ ಒಡೆಯರು ಅರಿಕುಠಾರ ಎಂದು ಕರೆಯುತ್ತಿದ್ದ, ಊರಿನ ಹೆಸರನ್ನು ಚಾಮರಾಜನಗರ ಎಂದು ಬದಲಾಯಿಸಿ, ನಗರದ ಹೃದಯ ಭಾಗದಲ್ಲಿ ಶ್ರೀಚಾಮರಾಜೇಶ್ವರ ದೇವಸ್ಥಾನವನ್ನು ಕಟ್ಟಿಸಿದರು. ಚಾಮರಾಜ ಒಡೆಯರು ಹುಟ್ಟಿದ ಜನನ ಮಂಟಪದಲ್ಲಿ ಶ್ರೀಚಾಮರಾಜೇಶ್ವರ ದರ್ಬಾರೋತ್ಸವವನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದರು. ಮೈಸೂರಿನಲ್ಲಿ ಜರುಗುವ ಮಹಾರಾಜರ ದರ್ಬಾರ್‌ನಂತೆಯೇ, ಜನನ ಮಂಟಪದಲ್ಲೂ ಶ್ರೀ ಚಾಮರಾಜೇಶ್ವರ ದರ್ಬಾರ್ ನಡೆಯುತ್ತಿತ್ತು. ಶ್ರೀಚಾಮರಾಜೇಶ್ವರ ಉತ್ಸವಮೂರ್ತಿಯನ್ನು ವಿವಿಧ ಆಭರಣಗಳಿಂದ ಸಿಂಗರಿಸಿ ದರ್ಬಾರ್‌ನಲ್ಲಿ ಕೂರಿಸಿ ವೈದಿಕರು, ಅರ್ಚಕರು, ಆಗಮಿಕರು ವೇದೋಷಗಳೊಂದಿಗೆ ಪರಾಕ್ ಹೇಳಿ 9 ದಿನಗಳ ಕಾಲವೂ ದರ್ಬಾರೋತ್ಸವ ನಡೆಯುತ್ತಿತ್ತು. ಇದು ಬರಬರುತ್ತಾ ಅನೇಕ ಕಾರಣಗಳಿಂದ ತನ್ನ ಮಹತ್ವವನ್ನು ಕಳೆದುಕೊಂಡಿತ್ತು. ಮೈಸೂರು ದಸರಾ ಮಹೋತ್ಸವ 2013 ರಿಂದ ಚಾಮರಾಜನಗರ ಜಿಲ್ಲೆಗೂ ವಿಸ್ತರಣೆಯಾಗಿದ್ದು, ಚಾ.ನಗರ ದಸರಾ ಮಹೋತ್ಸವದಲ್ಲಿ ಅನೇಕ ಐತಿಹಾಸಿಕ, ಸಾಂಸ್ಕೃತಿಕ, ಜಾನಪದ ಸೊಗಡು ಪಸರಿಸುತ್ತಿದೆ. ಇದೇ ಸಂದರ್ಭದಲ್ಲಿ ಶ್ರೀಚಾಮರಾಜೇಶ್ವರ ದರ್ಬಾರೋತ್ಸವ ಮರುಕಳಿಸುತ್ತಿರುವ ಗತವೈಭವಕ್ಕೆ ಸಾಕ್ಷಿಯಾಗುತ್ತಿದೆ.

ನೇಪಥ್ಯಕ್ಕೆ ಸರಿದಿದ್ದ ದರ್ಬಾರೋತ್ಸವ:
ಮೈಸೂರು ದಸರಾ ಸಂದರ್ಭದಲ್ಲಿ ಚಾಮರಾಜನಗರದಲ್ಲೂ ಶ್ರೀ ಚಾಮರಾಜೇಶ್ವರ ದರ್ಬಾರೋತ್ಸವ ನಡೆಸುವ ಉದ್ದೇಶದಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಸುಮಾರು 13 ಗ್ರಾಮಗಳನ್ನು ದೇವಸ್ಥಾನದ ಆದಾಯಕ್ಕೆ ಬಿಟ್ಟಿದ್ದರು. ದೇವಾಲಯದ ಆದಾಯ ಚೆನ್ನಾಗಿರುವವರೆಗೂ ಶ್ರೀಚಾಮರಾಜೇಶ್ವರ ದೇವಾಲಯದಲ್ಲಿ ವಿಜೃಂಭಣೆಯಿಂದ ಪೂಜಾ ಕೈಂಕರ್ಯಗಳು ನಡೆದುಕೊಂಡು ಬರುತ್ತಿದ್ದವು. ನವರಾತ್ರಿಯ ಸಮಯದಲ್ಲಿ ಶ್ರೀಚಾಮರಾಜೇಶ್ವರ ದರ್ಬಾರೋತ್ಸವವೂ ವಿಜೃಂಭಣೆಯಿಂದ ಜರುಗುತ್ತಿತ್ತು. ನಂತರದಲ್ಲಿ ಸರ್ಕಾರದ ರೀತಿನೀತಿಗಳು ಹಾಗೂ ಅನೇಕ ಕಾಯಿದೆಗಳಿಂದ ದೇವಸ್ಥಾನಕ್ಕೆ ಬರುವ ಆದಾಯ ಕಡಿಮೆಯಾಗಿ ದರ್ಬಾರೋತ್ಸವ ಮುಂತಾದ ಪೂಜಾಕೈಂಕರ್ಯಗಳು ನೇಪಥ್ಯಕ್ಕೆ ಸರಿದಿದ್ದವು. ಕೋಟ್ಯಾಂತರ ರೂ. ಖರ್ಚು ಮಾಡಿ ದಸರಾ ಆಚರಣೆ ಮಾಡುವ ಸಂದರ್ಭದಲ್ಲಿ ನಮ್ಮ ಐತಿಹಾಸಿಕ ಪರಂಪರೆಯನ್ನು ಸಾರುವ ಶ್ರೀಚಾಮರಾಜೇಶ್ವರ ದರ್ಬಾರೋತ್ಸವವು ಅನಾವರಣಗೊಳ್ಳಲಿ ಎಂಬ ಮಾತುಗಳು ಸಾರ್ವಜನಿಕರಿಂದ ಆಗಾಗ ಕೇಳಿಬರುತ್ತಿತ್ತು. ಅದು ಈ ಬಾರಿಯ ದಸರಾ ಮಹೋತ್ಸವದಲ್ಲಿ ಸಾಕಾರಗೊಳ್ಳಲಿದೆ.

ಮಹಾರಾಜರ ಕೊಡುಗೆ ಅನಾವರಣಗೊಳ್ಳಲಿ:
ಈ ಬಾರಿಯ ಚಾಮರಾಜೇಶ್ವರ ದಸರಾ ಮಹೋತ್ಸವದಲ್ಲಿ ಮೈಸೂರು ಮಹಾರಾಜರು ನಾಡಿಗೆ ನೀಡಿದ ಕೊಡುಗೆಗಳು ಅನಾವರಣಗೊಳ್ಳಲಿ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಚಾ.ನಗರ ದಸರಾ ಉದ್ಘಾಟನೆ ಸಮಯದಲ್ಲಿ ಹಾಗೂ ಮುಖ್ಯ ವೇದಿಕೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು, ಚಾಮರಾಜೇಂದ್ರ ಒಡೆಯರ ಭಾವಚಿತ್ರಗಳು ಕಡ್ಡಾಯವಾಗಿ ಇರಬೇಕು. ಕಲಾತಂಡಗಳ ಮೆರವಣಿಗೆ ಸಮಯದಲ್ಲಿ ಮಹಾರಾಜರ ಸಾಧನೆಗಳು ಪ್ರತಿಬಿಂಬಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮೈಸೂರು ಮಹಾರಾಜರ ಇತಿಹಾಸ ಮತ್ತು ಸಾಧನೆಗಳನ್ನು ಸಾರುವ ಹಾಡುಗಳು ಮತ್ತು ನೃತ್ಯಗಳು ಪ್ರದರ್ಶನಗೊಳ್ಳಬೇಕು. ಆಗಿದ್ದರೆ ಮಾತ್ರ ಮುಂದಿನ ಪೀಳಿಗೆಗೆ ನಾವು ದಸರಾ ಆಚರಣೆ ಮಹತ್ವವನ್ನು ತಿಳಿಸಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ಆಸಕ್ತಿ:
ಈ ಹಿಂದಿನ ವರ್ಷದ ದಸರಾ ಮಹೋತ್ಸವದಲ್ಲಿ ಶ್ರೀಚಾಮರಾಜೇಶ್ವರ ದರ್ಬಾರ್ ಆಚರಣೆಗೊಳ್ಳಲಿ ಎಂಬ ನಿಟ್ಟಿನಲ್ಲಿ ಕನ್ನಡದ ನಂ.1 ದಿನ ಪತ್ರಿಕೆ ವಿಜಯವಾಣಿ ವಿಶೇಷ ವರದಿಯನ್ನು ಪ್ರಕಟಿಸಿ ಗಮನಸೆಳೆದಿತ್ತು. ದಸರಾ ಪೂರ್ವಭಾವಿ ಸಭೆಯಲ್ಲೂ ಕೂಡ ಸಂಘ-ಸಂಸ್ಥೆಗಳ ಮುಖಂಡರು ಶ್ರೀಚಾಮರಾಜೇಶ್ವರ ದರ್ಬಾರ್ ನಡೆಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ವಿಶೇಷ ಆಸಕ್ತಿ ವಹಿಸಿ ಈ ಬಾರಿಯ ದಸರಾ ಮಹೋತ್ಸವದಲ್ಲಿ 1 ದಿನ ಶ್ರೀಚಾಮರಾಜೇಶ್ವರ ದರ್ಬಾರ್ ನಡೆಸುವಂತೆ ಅವಕಾಶ ಮಾಡಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇದು 9 ದಿನಗಳ ಕಾಲವೂ ಆಚರಿಸಲ್ಪಡುವಂತಾಗಲಿ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಈ ಹಿಂದಿನ ದಸರಾಮಹೋತ್ಸವದ ಸಂದರ್ಭದಲ್ಲಿ ವಿಜಯವಾಣಿ ಪತ್ರಿಕೆ ನೇತಥ್ಯಕ್ಕೆ ಸರಿದಿದ್ದ ಶ್ರೀಚಾಮರಾಜೇಶ್ವರ ದರ್ಬಾರ್ ಕುರಿತು ವಿಸ್ತಾರವಾದ ವರದಿಯನ್ನು ಪ್ರಕಟಿಸಿತ್ತು. ಈ ಬಾರಿಯ ದಸರಾದಲ್ಲಿ ಅದು ಸಾಕಾರಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ 9 ದಿನಗಳ ಕಾಲವು ಶ್ರೀಚಾಮರಾಜೇಶ್ವರ ದರ್ಬಾರ್ ನಡೆಯುವಂತಾಗಲಿ.-ರಾಮಕೃಷ್ಣ ಭಾರಧ್ವಜ್, ಅರ್ಚಕರು, ಶ್ರೀಚಾಮರಾಜೇಶ್ವರ ದೇವಾಲಯ, ಚಾಮರಾಜನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net